ಇಮ್ಯಾನ್ಯುಅಲ್ ಕಾಂಟ್ - ವಿಕಿಪೀಡಿಯ ಇಮ್ಯಾನ್ಯುಅಲ್ ಕಾಂಟ್ ವಿಕಿಪೀಡಿಯ ಇಂದ Jump to navigation Jump to search ಇಮ್ಯಾನ್ಯುಅಲ್ ಕಾಂಟ್ ಜನನ (೧೭೨೪-೦೪-೨೨)೨೨ ಏಪ್ರಿಲ್ ೧೭೨೪ Königsberg, Prussia (now Kaliningrad, ರಷ್ಯಾ) ಮರಣ ೧೨ ಫೆಬ್ರವರಿ ೧೮೦೪(1804-02-12) (aged ೭೯) Königsberg, Prussia ವಾಸ್ತವ್ಯ Königsberg, Prussia ರಾಷ್ಟ್ರೀಯತೆ Prussian ಕಾಲಮಾನ 18th-century philosophy ಪ್ರದೇಶ Western philosophy ಪರಂಪರೆ Kantianism Enlightenment philosophy ಮುಖ್ಯ  ಹವ್ಯಾಸಗಳು Epistemology Metaphysics Ethics Cosmogony ಅಧ್ಯಯನ ಮಾಡಿದ ಸಂಸ್ಥೆ University of Königsberg (PhD, 1755; Dr. habil., 1770) ಗಮನಾರ್ಹ ಚಿಂತನೆಗಳು Categorical imperative Transcendental idealism Synthetic a priori Noumenon Sapere aude Nebular hypothesis ಪ್ರಭಾವಕ್ಕೋಳಗಾಗು Wolff Baumgarten Plato Aristotle Empiricus Hume Smith Descartes Spinoza Leibniz Knutzen Locke Rousseau Newton Swedenborg Euclid Epicurus ಪ್ರಭಾವ ಬೀರು Virtually all subsequent Western philosophy, notably: Fichte Schelling Jacobi Reinhold F. Schlegel A.W. Schlegel Hegel Schopenhauer Nietzsche Peirce Husserl Heidegger Cassirer Habermas Rawls Chomsky Piaget Kierkegaard T.W. Adorno Hilbert Foucault Weber Strawson Strauss McDowell Simmel Azurmendi Guyer Seung Pogge Zongsan Nozick ಸಹಿ ಇಮ್ಯಾನ್ಯುಅಲ್ ಕಾಂಟ್ (22 ಏಪ್ರಿಲ್ 1724 - 12 ಫೆಬ್ರವರಿ 1804) ಆಧುನಿಕ ತತ್ವಶಾಸ್ತ್ರದ ಕೇಂದ್ರವ್ಯಕ್ತಿ ಎಂದು ಪರಿಗಣಿಸಲ್ಪಟ್ಟ ಜರ್ಮನಿಯ ತತ್ವಶಾಸ್ತ್ರಜ್ಞ. ಈತ ಪ್ರಸಿದ್ಧಿಗೆ ಬರುವುದಕ್ಕೆ ಮುಂಚೆ ಜರ್ಮನಿ ತತ್ತ್ವಶಾಸ್ತ್ರ ಚರಿತ್ರೆಯಲ್ಲಿ ಫ್ರಾನ್ಸ್ ಮತ್ತು ಇಂಗ್ಲೆಂಡುಗಳಷ್ಟು ಪ್ರಗತಿ ಪಡೆದಿರಲಿಲ್ಲ. ಇವನಿಂದ ಪ್ರಾರಂಭವಾಗಿ ಅನಂತರ ಬಂದ ಜಾರ್ಜ್ ವಿಲ್ಹೆಲ್ಮ್ ಹೆಗಲ್ ಮತ್ತು ಆರ್ಥರ್ ಷೋಪೆನ್ ಹೌರ್ ಅವರ ಮೂಲಕ ಒಂದು ಶತಮಾನ ಕಾಲ ಪಾಶ್ಚಾತ್ಯ ತತ್ತ್ವಶಾಸ್ತ್ರ ಚರಿತ್ರೆಯಲ್ಲಿ ಜರ್ಮನಿ ತುಂಬ ಪರಿಣಾಮಕಾರಿಯಾಯಿತು. ಪರಿವಿಡಿ ೧ ಬಾಲ್ಯ ಮತ್ತು ಜೀವನ ೨ ಬರವಣಿಗೆ ೩ ಕಾಂಟನ ತತ್ತ್ವವಿಚಾರಗಳು ೩.೧ ವಿಚಾರಪೂರ್ವ ಅವಧಿ ೩.೨ ವಿಚಾರ ಅವಧಿ ೩.೩ ಈಸ್ತೆಟಿಕ್ ೩.೪ ಟ್ರಾನ್ಸೆಂಡೆಂಟಲ್ ಅನಲಿಟಿಕ್ ೩.೫ ಟ್ರಾನ್ ಸೆಂಡೆಂಟಲ್ ಡಯಲೆಕ್ಟಿಕ್ ೩.೬ ವೈಚಾರಿಕ ಮತಶಾಸ್ತ್ರ ೩.೭ ಕ್ರಿಟೀಕ್ ಆಫ್ ಪ್ರ್ಯಕ್ಟಿಕಲ್ ರೀಸನ್ ೪ ವಿಚಾರ ಅವಧಿಯ ಅನಂತರ ಬರೆವಣಿಗಳು ೫ ಬಾಹ್ಯ ಸಂಪರ್ಕಗಳು ೬ ಉಲ್ಲೇಖ ಬಾಲ್ಯ ಮತ್ತು ಜೀವನ[ಬದಲಾಯಿಸಿ] ಕಾಂಟ್ ಪೂರ್ವ ಪ್ರಷ್ಯದ ಕೋನಿಗ್ಸ್‍ಬರ್ಗ್ ಎಂಬ ಪಟ್ಟಣದಲ್ಲಿ 1724ರ ಏಪ್ರಿಲ್ 22ರಂದು ಜನಿಸಿದ. ತಂದೆ ಬಡವ; ಕುದುರೆಯ ಜೀನು ಮೊದಲಾದವುಗಳನ್ನು ತಯಾರಿಸಿ ಜೀವನ ನಡೆಸುತ್ತಿದ್ದ. ತಾತ ಸ್ಕಾಟ್ಲೆಂಡಿನಿಂದ ಬಂದವನೆಂದು ಕಾಂಟ್ ಹೇಳಿಕೆಯಿಂದಲೇ ಗೊತ್ತಾಗುತ್ತದೆ ತಾಯಿ ಕ್ರೈಸ್ತರ ಪಯಟಿಸ್ಟ್ ಗುಂಪಿಗೆ ಸೇರಿದವಳಾಗಿದ್ದು ತುಂಬ ಕಟ್ಟುನಿಟ್ಟಿನಿಂದ ಕ್ರೈಸ್ತಧರ್ಮವನ್ನು ಅನುಸರಿಸುತ್ತಿದ್ದಳು. ಕಾಂಟನ ಶೀಲವನ್ನು ಕುದುರಿಸಲು ಈಕೆ ಮುಖ್ಯ ಕಾರಣಳು. ಕೋನಿಗ್ಸ್‍ಬರ್ಗ್‍ನ ಕೊಲೀಜಿಯಮ್ ಫ್ರೆಡರೀಸಿಯಂ ಎಂಬ ಪಾಠಶಾಲೆಯಲ್ಲಿ ವಿದ್ಯಾಭ್ಯಾಸ ಮುಗಿಸಿದ ಅನಂತರ ಕಾಂಟ್ ಅಲ್ಲಿನ ವಿಶ್ವವಿದ್ಯಾನಿಲಯದಲ್ಲಿ ತನ್ನ ವಿದ್ಯಾಭಾಸವನ್ನು ಮುಂದುವರಿಸಿ (1740) ಲ್ಯಾಟಿನ್ ಭಾಷೆಯಲ್ಲೂ ಲೈಬ್ನಿಟ್ಸ್‍ನ ತತ್ತ್ವ ಸಿದ್ಧಾಂತದಲ್ಲೂ ಪ್ರೌಢಿಮೆ ಪಡೆದ; 1746ರಲ್ಲಿ ಲೈಬ್ನಿಟ್ಸ್‍ನ ತತ್ತ್ವದ ಒಂದು ಅಂಶವನ್ನು ಕುರಿತು ಒಂದು ಪ್ರಬಂಧವನ್ನು ಬರೆದ. ವಿಶ್ವವಿದ್ಯಾನಿಲಯವನ್ನು ಬಿಟ್ಟಮೇಲೆ ಈತ ತನ್ನ ಮನೆಯಲ್ಲೇ ಕೆಲವು ಹುಡುಗರಿಗೆ ಪಾಠ ಹೇಳಿ ಜೀವನ ನಡೆಸುತ್ತಿದ್ದ. ಈ ಕಾಲದಲ್ಲಿ ಕಾಂಟನ ಮನಸ್ಸು ವಿಜ್ಞಾನ ವಿಷಯಗಳಲ್ಲಿ ಆಸಕ್ತವಾಯಿತು. 1743ರಲ್ಲಿ ಜೀವಶಕ್ತಿಗಳನ್ನು ಕುರಿತು ಥಾಟ್ಸ್ ಆನ್ ದಿ ಟ್ರೂ ಎಸ್ಟಿಮೇಷನ್ ಆಫ್ ಲಿವಿಂಗ್ ಫೋರ್ಸಸ್ ಎಂಬ ಪ್ರಬಂಧವನ್ನು ಬರೆದ. 1755ರಲ್ಲಿ ಸಂಬಳವಿಲ್ಲದ ಉಪನ್ಯಾಸಕನಾಗಿ ಕೋನಿಗ್ಸ್ ಬರ್ಗ್ ವಿಶ್ವವಿದ್ಯಾನಿಲಯವನ್ನು ಸೇರಿ ಹದಿನೈದು ವರ್ಷ ಕಾಲ ಉಪನ್ಯಾಸಗಳನ್ನು ಕೊಟ್ಟ. ೧೭೭೦ರಲ್ಲಿ ತರ್ಕ ಮತ್ತು ತತ್ತ್ವಶಾಸ್ತ್ರದ ಪ್ರಾಧ್ಯಾಪಕನಾಗಿ ಚುನಾಯಿತನಾದನಲ್ಲದೆ ಹೆಚ್ಚು ಕಡಿಮೆ ಜೀವನದ ಕೊನೆಯ ವರ್ಷಗಳ ವರೆಗೂ ಅದೇ ಕೆಲಸದಲ್ಲಿ ನಿರತನಾಗಿದ್ದ. ಕಾಂಟ್ ಮದುವೆಯಾಗಲಿಲ್ಲ. ಇವನದು ಅತ್ಯಂತ ಕ್ರಮಬದ್ಧವಾದ ಜೀವನ. ನಿತ್ಯವೂ ಸಂಜೆ ಗೊತ್ತಾದ ವೇಳೆಯಲ್ಲಿ ಆತ ಸಂಚಾರಕ್ಕಾಗಿ ಹೊರಟಾಗ ನೆರೆಯವರು. ತಮ್ಮ ಗಡಿಯಾರಗಳನ್ನು ಸರಿಪಡಿಸಿಕೊಳ್ಳುತ್ತಿದ್ದರಂತೆ. ಕಾಂಟ್ ದೃಢಕಾಯನಲ್ಲದಿದ್ದರೂ ವೈದ್ಯರ ನೆರವಿಲ್ಲದೆ ಕಟ್ಟುನಿಟ್ಟಾದ ಕ್ರಮಜೀವನದ ಮೂಲಕ ತನ್ನ ಆರೋಗ್ಯವನ್ನು ಕಾಪಾಡಿಕೊಂಡಿದ್ದ. ತನ್ನ ಸ್ನೇಹಿತರೊಡನೆ ಸೇರಿ ಭೋಜನೆ ಮಾಡುತ್ತ ಸರಸ ಸಂಭಾಷಣೆಗಳಲ್ಲಿ ತೊಡಗುವುದು ಅವನ ದಿನಚರಿಯಾಗಿತ್ತು. ಕಾಂಟನ ಬೌದ್ಧಿಕ ಮತ್ತು ಸಾಂಸ್ಕೃತಿಕ ಆಸಕ್ತಿಗಳು ವಿಶಾಲವಾದುವು. ಅವನಿಗೆ ಇಂಗ್ಲಿಷ್ ಮತ್ತು ಫ್ರೆಂಚ್ ಸಾಹಿತ್ಯಗಳಲ್ಲಿ ವಿಶೇಷ ಆಸಕ್ತಿ ಇತ್ತು. ರೂಸೋವಿನ ಸೋಷಿಯಲ್ ಕಾಂಟ್ರ್ಯಾಕ್ಟ್ ಎಂಬ ಗ್ರಂಥ ಕೈ ಸೇರಿದ ದಿನ ಆತ ತನ್ನ ಕಟ್ಟುನಿಟ್ಟಿನ ದೈನಂದಿನ ಕಾರ್ಯಕ್ರಮವನ್ನೂ ಪಾಲಿಸದೆ ಇಡೀ ದಿನವೆಲ್ಲ ಕುಳಿತು ಅದನ್ನು ಓದಿದನಂತೆ. ಕೋನಿಗ್ಸ್‍ಬರ್ಗನ್ನು ಬಿಟ್ಟು ಹೊರಗೆ ಹೋಗದಿದ್ದರೂ ಈತನಿಗೆ ದೇಶ ವಿದೇಶಗಳ ಪ್ರವಾಸ ಸಾಹಿತ್ಯದಲ್ಲಿ ವಿಶೇಷ ಆಸಕ್ತಿ ಇತ್ತು. ಭೂಗೋಳದ ವಿಚಾರವಾಗಿ ಈತ ಉಪನ್ಯಾಸ ಮಾಡಿದ್ದುಂಟು. ಅಂದಿನ ಯೂರೋಪಿನ ರಾಜಕೀಯ ವಿದ್ಯಮಾನಗಳನ್ನು ತಿಳಿದುಕೊಳ್ಳಲು ಈತ ತುಂಬ ಕುತೂಹಲಿಯಾಗಿದ್ದ. ಫ್ರಾನ್ಸಿನ ಮಹಾಕ್ರಾಂತಿಯ ವಿಷಯದಲ್ಲಿ ಈತನಿಗಿದ್ದ ಉತ್ಸಾಹ ಬಲು ಉತ್ಕಟವಾದುದು. ಕಾಂಟನ ವಿಚಾರದಲ್ಲಿ ಪ್ರಷ್ಯದ ರಾಜನೂ ವಿದ್ಯಾಮಂತ್ರಿಯೂ ಸ್ನೇಹದಿಂದಿದ್ದರು. ಕಾಂಟ್ ತನ್ನ ಮೊದಲ ಬೃಹದ್ ಗ್ರಂಥವನ್ನು ವಿದ್ಯಾಮಂತ್ರಿ ಜೆಡ್ಲಿಟ್ಸ್‍ಗೆ ನಿವೇದಿಸಿದ. ಅದನ್ನು ಮೆಚ್ಚಿದ ಮಂತ್ರಿ ಹಾಲ್ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕ ಸ್ಥಾನವನ್ನು ಇವನಿಗೆ ಮೀಸಲಿಟ್ಟಿರುವುದಾಗಿ ತಿಳಿಸಿದ. ಆದರೆ ಕಾಂಟ್ ಕೋನಿಗ್ಸ್ ಬರ್ಗನ್ನು ಬಿಟ್ಟು ಹೋಗಲು ಒಪ್ಪಲಿಲ್ಲ. ವೃದ್ಧಾಪ್ಯದಲ್ಲಿ ಕಾಂಟ್‍ಗೂ ಸರ್ಕಾರಿ ಆಡಳಿತಗಾರರಿಗೂ ಸ್ವಲ್ಪ ವೈಮನಸ್ಯ ಹುಟ್ಟಿತು. ಅದಕ್ಕೆ ಇವನು ಬರೆದ ವಿಚಾರಾತ್ಮಕ ಮತಗ್ರಂಥವಾದ ರಿಲಿಜನ್ ವಿದಿನ್ ದಿ ಬೌಂಡ್ಸ್ ಆಫ್ ಮಿಯರ್ ರೀಸನ್ (1793) ಎಂಬ ಗ್ರಂಥವೇ ಕಾರಣ. ಮತವಿಚಾರದಲ್ಲಿ ಕಾಂಟನ ಅಭಿಪ್ರಾಯಗಳು ಸಾಂಪ್ರದಾಯಿಕ ಕ್ರೈಸ್ತತತ್ತ್ವಕ್ಕೆ ವಿರುದ್ಧವಾದುವೆಂದೂ ಆದ್ದರಿಂದ ಅವನು ಮತವಿಚಾರವಾಗಿ ಇನ್ನು ಮುಂದೆ ತನ್ನ ಅಭಿಪ್ರಾಯಗಳನ್ನು ಪ್ರಕಟಪಡಿಸಕೂಡದೆಂದೂ ಪ್ರಷ್ಯದ ದೊರೆ ಕಾಂಟ್‍ಗೆ ಒಂದು ನಿರೂಪವನ್ನು ಕಳುಹಿಸಿದ. ಮತವಿಚಾರವಾಗಿ ತನ್ನ ಅಭಿಪ್ರಾಯಗಳನ್ನು ಪ್ರಕಟಿಸುವುದಿಲ್ಲವೆಂದು ದೊರೆಗೆ ಕಾಂಟ್ ವಾಗ್ದಾನ ಮಾಡಿದ. ದೊರೆ ಬದುಕಿರುವಷ್ಟು ಕಾಲ ಮಾತ್ರ ಆ ವಾಗ್ದಾನಕ್ಕೆ ತಾನು ಬದ್ಧನಾಗಿರುವುದಾಗಿಯೂ ದೊರೆಯ ಮರಣಾನಂತರ ತನ್ನ ಅಭಿಪ್ರಾಯಗಳನ್ನು ಪ್ರಕಟಿಸುವ ಸ್ವಾತಂತ್ರ್ಯ ತನಗಿರುವುದೆಂದೂ ಕಾಂಟ್ ಹೇಳುತ್ತಿದ್ದ. ದೊರೆ ಮರಣ ಹೊಂದಿದ (1797) ಮಾರನೆಯ ವರ್ಷ ಅದುವರೆಗೂ ನಿಷೇಧಿಸಿದ್ದ ವಿಷಯವನ್ನು ಕುರಿತು ದಿ ಕಾನ್ ಫ್ಲಿಕ್ಟ್ ಆಫ್ ಫ್ಯಾಕಲ್ಟೀಸ್ ಎಂಬ ಗ್ರಂಥವನ್ನು ಬರೆದ. ಇದನ್ನು ಬರೆದ ಮೂರು ವರ್ಷಗಳ ಮೇಲೆ ಕಾಂಟಿನ ಆರೋಗ್ಯ ಕೆಟ್ಟಿತು; 1804ನೆಯ ಇಸವಿ ಫೆಬ್ರವರಿ ಹನ್ನೆರಡರಂದು ಸ್ವರ್ಗಸ್ಥನಾದ. ಬರವಣಿಗೆ[ಬದಲಾಯಿಸಿ] ಕಾಂಟನ ಸುಪ್ರಸಿದ್ಧ ತತ್ತ್ವಗ್ರಂಥಗಳಿವು : ಕ್ರಿಟೀಕ್ ಆಫ್ ಪ್ಯೂರ್ ರೀಸನ್ (1781), ಫೌಂಡೇಷನ್ಸ್ ಆಫ್ ದಿ ಮೆಟಫಿಸಿಕ್ಸ್ ಆಫ್ ಎಥಿಕ್ಸ್ (1785), ಕ್ರಿಟೀಕ್ ಆಫ್ ಪ್ರ್ಯಾಕ್ಟಿಕಲ್ ರೀಸನ್ (1788), ಕ್ರಿಟೀಕ್ ಆಫ್ ಜಜ್‍ಮೆಂಟ್ (1790), ರಿಲಿಜನ್ ವಿದಿನ್ ದಿ ಬೌಂಡರೀಸ್ ಆಫ್ ಪ್ಯೂರ್ ರೀಸನ್ (1793-94). ಕಾಂಟನ ತತ್ತ್ವವಿಚಾರಗಳು[ಬದಲಾಯಿಸಿ] ತತ್ತ್ವದ ಬೆಳೆವಣಿಗೆಯ ದೃಷ್ಟಿಯಿಂದ ಕಾಂಟನ ಬರೆವಣಿಗೆಯ ಕಾಲಾವಧಿಯನ್ನು ಸ್ಥೂಲವಾಗಿ 1747 ರಿಂದ 1770ರ ವರೆಗಿನ ವಿಚಾರ ಪೂರ್ವ (ಪ್ರಿಕ್ರಿಟಿಕಲ್) ಅವಧಿ, 1770 ರಿಂದ 1790ರ ವರೆಗಿನ ವಿಚಾರ ಅವಧಿ (ಕ್ರಿಟಕಲ್), 1790 ರಿಂದ ಈಚಿನ ಅವಧಿ ಎಂದು ಮೂರಾಗಿ ವಿಭಾಗಿಸುತ್ತಾರೆ. ವಿಚಾರಪೂರ್ವ ಅವಧಿ[ಬದಲಾಯಿಸಿ] ಈ ಅವಧಿಯ ತತ್ತ್ವ ವಿಶೇಷವಾಗಿ ಲೈಬ್ನಿಟ್ಸನ ತತ್ತ್ವದ ಆಲಂಬನದಿಂದ ಹುಟ್ಟಿದುದು. ಈ ಕಾಲದಲ್ಲಿ ಜರ್ಮನಿಯ ವಿಶ್ವವಿದ್ಯಾನಿಲಯಗಳಲ್ಲಿ ಲೈಬ್ನಿಟ್ಸನ ತತ್ತ್ವವನ್ನು ಪ್ರಚಾರ ಮಾಡಿದವರು ಕ್ರಿಶ್ಚಿಯನ್ ವುಲ್ಫ್ ಮತ್ತು ಅಲೆಕ್ಸಾಂಡರ್ ಗಾಟಲೀ ಬಾಮ್ ಗಾರ್ಟನ್ ಎಂಬ ತಾತ್ತ್ವಿಕರು. ಲೈಬ್ನಿಟ್ಸನ ತತ್ತ್ವಕ್ಕೆ ಕಾಂಟ್ ಮಾರುಹೋದದ್ದು ಈ ಇಬ್ಬರ ಬೋಧೆಯ ಪರಿಣಾಮವಾಗಿ. ಲೈಬ್ನಿಟ್ಸನ ಮೂಲತತ್ತ್ವಗಳನ್ನು ಅಂಗೀಕರಿಸಿದ್ದರೂ ಅವುಗಳ ವಿಚಾರವಾಗಿ ಕೆಲವು ಸಂದೇಹಗಳು ಕಾಂಟನನ್ನು ಬಾಧಿಸುತ್ತಿದ್ದವು. ಇವನ ಆ ಸಂದೇಹಗಳಿಗೆ ನ್ಯೂಟನ್ನನ ತತ್ತ್ವಗಳಲ್ಲಿದ್ದ ಶ್ರದ್ಧೆ ಮುಖ್ಯ ಕಾರಣ. ಈ ಸಂದೇಹಗಳು ಮುಖ್ಯವಾಗಿ ಮೂರು ವಿಷಯಗಳಿಗೆ ಸಂಬಂಧಪಟ್ಟವು. ಲೈಬ್ನಿಟ್ಸ್ ತನ್ನ ತತ್ತ್ವಕ್ಕೆ ಆಧಾರವಾಗಿ ಉಪಯೋಗಿಸಿದ ಗಣಿತ ವಿಧಾನ ಒಂದು, ಕಾರ್ಯಕಾರಣ ಭಾವನೆ ಎರಡನೆಯದು, ಆಕಾಶದ ಭಾವನೆ ಮೂರನೆಯದು. ಈ ಸಂದೇಹಗಳು ಹುಟ್ಟಲು ಮುಖ್ಯವಾಗಿ ಆಂಗ್ಲೇಯ ವಿಜ್ಞಾನಿ ಐಸಾಕ್ ನ್ಯೂಟನ್ ಮತ್ತು ಆಂಗ್ಲೇಯ ತಾತ್ತ್ವಿಕ ಡೇವಿಡ್ ಹ್ಯೂಂ-ಇವರು ಕಾರಣರು. ಗಣಿತ ಮಾರ್ಗವನ್ನು ಅನುಸರಿಸಿ ತತ್ತ್ವಶಾಸ್ತ್ರವನ್ನು ರೂಪಿಸಬೇಕೆಂದು ಲೈಬ್ನಿಟ್ಸನ ಅಭಿಮತ. ಇದಕ್ಕೆ ವಿರುದ್ಧವಾಗಿ ಮತಮೀಮಾಂಸೆ ಮತ್ತು ನೀತಿಮೀಮಾಂಸೆಗಳು ಅನುಸರಿಸಬೇಕಾದ ವಿಧಾನಗಳು ಬೇರೆ ಬೇರೆ ಎಂದು ಕಾಂಟ್ 1764ರಲ್ಲಿ ತಾನು ಬರೆದ ಒಂದು ಪ್ರಬಂಧದಲ್ಲಿ ತೋರಿಸಿದ; ಹಾಗೆಯೇ 1765ರಲ್ಲಿ ಬರೆದ ಇನ್ನೊಂದು ಪ್ರಬಂಧದಲ್ಲಿ ಕಾರ್ಯಕಾರಣ ಸಂಬಂಧವೂ ದೇಶಕಾಲ ಸಂಬಂಧವೂ ಗಣಿತ ಪ್ರತಿಜ್ಞೆಗಳಿಗೆ ಇರುವ ಸಂಬಂಧಕ್ಕಿಂತ ಬೇರೆಯಾದವೆಂದೂ ಕೇವಲ ಬುದ್ಧಿಯ ಅಂತರಿಕ ಭಾವನೆಗಳ ಸಂಬಂಧಗಳನ್ನು ತಾರ್ಕಿಕವಾಗಿ ತಿಳಿದ ಮಾತ್ರಕ್ಕೇ ಅವುಗಳ ಮೂಲಕ ಹೊರಪ್ರಪಂಚದ ಜ್ಞಾನ ಹುಟ್ಟುವುದಿಲ್ಲ ಎಂದೂ ತೋರಿಸಿದ. ವಿಚಾರಪೂರ್ವ ಅವಧಿಯಲ್ಲಿ ಕಾಂಟ್ ಒಮ್ಮೆ ಲೈಬ್ನಿಟ್ಸನತ್ತ ಇನ್ನೊಮ್ಮೆ ಹ್ಯೂಮನತ್ತ ವಾಲಿದ್ದಾನೆ. ಎರಡರ ವಿಚಾರವಾಗಿಯೂ ಸಂಶಯಪಟ್ಟಿದ್ದಾನೆ. ಈ ಕಾಲದಲ್ಲಿ ತನ್ನ ಸ್ವಂತ ತತ್ತ್ವವೇನೆಂಬುದನ್ನು ಈತ ಇನ್ನೂ ಮನಗಂಡಿರಲಿಲ್ಲ. ಆದರೂ ಆ ಇಬ್ಬರ ತತ್ತ್ವದಲ್ಲೂ ಈತ ಕಂಡ ಲೋಪಗಳು ಹೊಸ ತತ್ತ್ವಕ್ಕೆ ದಾರಿಮಾಡಿಕೊಟ್ಟುವು. ಲೈಬ್ನಿಟ್ಸ್ ತನ್ನ ತತ್ತ್ವಕ್ಕೆ ಮೂಲಾಧಾರವಾಗಿ ಇಟ್ಟುಕೊಂಡಿದ್ದ ಚೇತನದ ಆಂತರಿಕ ಭಾವನೆಗಳನ್ನು ಕಾಂಟ್ ರಕ್ತಮಾಂಸಗಳನ್ನೊಳಗೊಳ್ಳದ ಪ್ರೇತಗಳಂತೆ ಭಾವಿಸಿದ. ಈ ಭಾವನೆಗಳನ್ನು ಕೇವಲ ತಾರ್ಕಿಕ ನಿಯಮಗಳಿಂದ ಹೊಸೆದು ತನ್ನ ತತ್ತ್ವಸೌಧವನ್ನು ಕಟ್ಟಲು ಲೈಬ್ನಿಟ್ಸ್ ಪ್ರಯತ್ನಿಸಿದ್ದರಿಂದ ಅದು ಅನುಭವ ಪ್ರಪಂಚಕ್ಕೆ ಸಂಬಂಧಿಸದೆ ಕೇವಲ ಗಾಳಿಯಲ್ಲಿ ಕಟ್ಟಿದ ಗೋಪುರದಂತಿತ್ತು. ಇದಕ್ಕೆ ವ್ಯತಿರಿಕ್ತವಾಗಿ ಹ್ಯೂಂ ಈ ಆಂತರಿಕವಾದ ಮಾನಸಿಕ ಭಾವನೆಗಳು ಅನುಭವವೇದ್ಯವಲ್ಲವೆಂದೂ ಅನುಭವಕ್ಕೆ ವೇದ್ಯವಾದ ಅಂಶಗಳು ಬಿಡಿಬಿಡಿಯಾದ ಇಂದ್ರಿಯಾನುಭವಗಳು ಮಾತ್ರವೇ, ಸಕಲ ಜ್ಞಾನವೂ ಹುಟ್ಟುವುದು ಮೇಣದಂತಿರುವ ಮನಸ್ಸಿನ ಮೇಲೆ ಹೊರವಸ್ತುಗಳು ಒತ್ತಿದ ಮುದ್ರೆಗಳಿಂದ ಮಾತ್ರವೇ-ಎಂದು ವಾದಿಸಿದ್ದ. ಕಾಂಟ್ ಈ ಎರಡು ಪಂಥಗಳನ್ನೂ ವಿಮರ್ಶೆಗೆ ಒಳಪಡಿಸಿ ಅವುಗಳಲ್ಲಿ ಕಂಡುಬಂದ ನ್ಯೂನತೆಗಳನ್ನು ಹೊರಹಾಕಿ, ಅವೆರಡರಲ್ಲೂ ಅಡಗಿದ್ದ ಸಾರಾಂಶವನ್ನು ಸಮನ್ವಯಗೊಳಿಸಿ ತನ್ನ ತತ್ತ್ವವನ್ನು ಏರ್ಪಡಿಸಿದ. ಪ್ರಕೃತಿಯ ವಿಷಯವಾದ ಜ್ಞಾನ ಪ್ರಾರಂಭವಾಗುವುದು ಇಂದ್ರಿಯಾನುಭವಗಳ ಮೂಲಕ ಎಂದು ಹ್ಯೂಂ ಹೇಳಿದ್ದನ್ನು ಕಾಂಟ್ ಒಪ್ಪಿಕೊಂಡು; ಆದರೆ ಜ್ಞಾನಸರ್ವಸ್ವವೂ ಇಂದ್ರಿಯಗಳ ಮೂಲಕ ಮಾತ್ರ ಅವತರಿಸಿದ್ದಲ್ಲ ಎಂದು ಹೇಳಿ ಲೈಬ್ನಿಟ್ಸನ ಅಭಿಪ್ರಾಯವನ್ನು ಸಮರ್ಥಿಸಿದ. ಆದರೆ ಈ ಅಂತರಿಕ ಭಾವನೆಗಳು ಇಂದ್ರಿಯಾನುಭವ ಹುಟ್ಟುವುದಕ್ಕೆ ಮೊದಲೇ ಅಲ್ಲಿ ಇರುವುದಿಲ್ಲ; ಇಂದ್ರಿಯಾನುಭವದ ಜೊತೆಯಲ್ಲೇ ಅದಕ್ಕೆ ಸೇರಿದಂತೆಯೇ ಮಾನಸಿಕ ಚಟುವಟಿಕೆಯ ರೂಪದಲ್ಲಿ ಅವು ಪ್ರಕಟವಾಗುತ್ತವೆ ಎಂದು ತೋರಿಸಿದ. ಆಂತರಿಕ ಭಾವನೆಗಳ ಸಂಪರ್ಕವಿಲ್ಲದ ಇಂದ್ರಿಯಾನುಭವ ಕುರುಡು; ಇಂದ್ರಿಯಾನುಭವದ ಸಂಪರ್ಕವಿಲ್ಲದ ಅಂತರಿಕ ಭಾವನೆಗಳು ಜಳ್ಳು ಎಂಬ ಕಾಂಟನ ಪ್ರಖ್ಯಾತವಾದ ಹೇಳಿಕೆ ಅವನ ವಿಚಾರತತ್ತ್ವದ ಅಡಿಗಲ್ಲು. ವಿಚಾರ ಅವಧಿ[ಬದಲಾಯಿಸಿ] ಕ್ರಿಟೀಕ್ ಆಫ್ ಪ್ಯೂರ್ ರೀಸನ್ ಎಂಬ ಕಾಂಟನ ಮಹಾ ಗ್ರಂಥ ಮೂರು ಭಾಗಗಳನ್ನು ಒಳಗೊಂಡಿದೆ. ಮೊದಲನೆಯದು ಟ್ರಾನ್ ಸೆಂಡೆಂಟಲ್ ಈಸ್ತೆಟಿಕ್ಸ್, ಎರಡನೆಯದು ಟ್ರಾನ್ ಸೆಂಡೆಂಟಲ್ ಅನಲಿಟಿಕ್, ಮೂರನೆಯದು ಟ್ರಾನ್ ಸೆಂಡೆಂಟಲ್ ಡಯಲೆಕ್ಟಿಕ್. ಹಿಂದಿನ ತಾತ್ತ್ವಿಕರು ಜ್ಞಾನದ ವಿಚಾರವಾಗಿ ಕೇಳಿದ ಪ್ರಶ್ನೆ ಇದು: ನಮ್ಮ ಜ್ಞಾನ ಹೇಗೆ ಹುಟ್ಟುತ್ತದೆ? ಅದಕ್ಕೆ ಕಾರಣ ಯಾವುದು? ಅದು ಯಾವುದರಿಂದ ಹುಟ್ಟುತ್ತದೆ? ಈ ರೀತಿ ಪ್ರಶ್ನೆ ಕೇಳುವುದು ಆಯುಕ್ತವೆಂದು ಕಾಂಟನ ನಿಲವು. ಏಕೆಂದರೆ ಈ ರೀತಿ ಪ್ರಶ್ನೆ ಕೇಳಿದಾಗ ಜ್ಞಾನ ಹುಟ್ಟುವುದಕ್ಕೆ ಮುಂಚೆ ಅದಕ್ಕೆ ಹೊರತಾದ ಯಾವುದೋ ಇದೆ ಎಂದು ಭಾವಿಸುತ್ತೇವೆ. ಅನುಭವಕ್ಕೆ ಹೊರತಾದ ಯಾವುದೋ ಒಂದರಿಂದ ಅನುಭವದ ಹುಟ್ಟನ್ನು ತಿಳಿಯಲು ಪ್ರಯತ್ನಿಸುತ್ತೇವೆ. ಅಂದರೆ ಅನುಭವವಿಲ್ಲದ ಅಥವಾ ತಿಳಿಯದ ಅಂಶದ ಮೂಲಕ ತಿಳಿದುದರ ಕಾರಣವನ್ನು ವಿವರಿಸಲು ಪ್ರಯತ್ನಿಸುತ್ತೇವೆ. ಮುಖ್ಯವಾಗಿ ಲಕ್ಷಿಸಬೇಕಾದುದು ಇದು: ನಮಗೆ ಅನುಭವವಿದೆ, ಗಣಿತ ಜ್ಞಾನವಿದೆ, ಭೌತಶಾಸ್ತ್ರ ಜ್ಞಾನವಿದೆ. ಗಣಿತಜ್ಞಾನ ಸಾಧ್ಯವಾಗಿರುವುದು ಹೇಗೆ? ಭೌತಶಾಸ್ತ್ರಜ್ಞಾನ ಸಾಧ್ಯವಾಗಿರುವುದು ಹೇಗೆ? ಈ ಪ್ರಶ್ನೆಗಳನ್ನು ಬಗೆಹರಿಸಲು ನಾವು ನಮಗೆ ಸಾಧ್ಯವಾಗಿರುವ ಜ್ಞಾನದಲ್ಲೇ ಹುದುಗಿರುವ ಭಾವನಾರೂಪಗಳನ್ನು (ಫಾರಮ್ಸ್) ವಿಶದ ಪಡೆಸಬೇಕು. ಆದ್ದರಿಂದ ಯುಕ್ತವಾದ ಮಾರ್ಗ ನಿರ್ವಿಚಾರವಾದವೂ (ಡಾಗ್ಮ್ಯಾಟಿ ಸಂ) ಅಲ್ಲ, ಕೇವಲ ಅನುಭವಾರೂಢವಾದವೂ (ಎಂಪಿರಿಸಂ) ಅಲ್ಲ. ಅದು ವಿಮರ್ಶಾವಾದ (ಕ್ರಿಟಿಸಿಸಂ) ಈ ವಿಮರ್ಶಾವಾದವನ್ನು ಅನುಸರಿಸಿ ಕಾಂಟ್ ಕ್ರಿಟೀಕ್ ಆಫ್ ಪೂರ್ ರೀಸನಿನ ಮೊದಲನೆಯ ಭಾಗವಾದ ಈಸ್ತೆಟಿಕ್ ನಲ್ಲಿ ಇಂದ್ರಿಯಾನುಭವದ ತಳಹದಿಯ ಭಾವನಾ ರೂಪಗಳನ್ನು ವಿಚಾರ ಮಾಡುತ್ತಾನೆ. ಎರಡನೆಯ ಭಾಗವಾದ ಅನಲೆಟಿಕ್ ನಲ್ಲಿ ಭೌತಶಾಸ್ತ್ರಜ್ಞಾನದ ತಳಹದಿಯ ಭಾವನಾರೂಪಗಳನ್ನು ವಿಚಾರ ಮಾಡುತ್ತಾನೆ. ಮೂರನೆಯ ಭಾಗವಾದ ಡಯಲೆಕ್ಟಿಕ್ ನಲ್ಲಿ ಪರತತ್ತ್ವದ ತಳಹದಿಯ ಭಾವನಾ ರೂಪಗಳನ್ನು ವಿಮರ್ಶೆ ಮಾಡುತ್ತಾನೆ. ಇಂದ್ರಿಯಾನುಭವದ ತಳಹದಿಯ ಭಾವನಾ ರೂಪಗಳನ್ನು ಫಾರಮ್ಸ್ ಆಫ್ ಸೆನ್ಸಿಬಿಲಿಟಿ ಎಂದೂ ಭೌತಶಾಸ್ತ್ರಜ್ಞಾನದ ತಳಹದಿಯಾದ ಬುದ್ಧಿಯ ಭಾವನಾರೂಪಗಳನ್ನು ಕ್ಯಾಟಗೊರೀಸ್ ಆಫ್ ಅಂಡರ್ ಸ್ಟ್ಯಾಂಡಿಂಗ್ ಎಂದೂ ಪರತತ್ತ್ವದ ತಳಹದಿಯ ಭಾವನಾರೂಪಗಳನ್ನು ಐಡಿಯಾಸ್ ಆಫ್ ರೀಸನ್ ಎಂದೂ ಕರೆದಿರುತ್ತಾನೆ. ಈಸ್ತೆಟಿಕ್[ಬದಲಾಯಿಸಿ] ಈಸ್ತೆಟಿಕ್ ಎಂಬ ಪದ ಈಗ ಸಾಮಾನ್ಯವಾಗಿ ಕಲೆಯ ತತ್ತ್ವಕ್ಕೆ ಮೀಸಲಾಗಿದೆ. ಆದರೆ ಕಾಂಟ್ ಈ ಪದವನ್ನು ಈಸ್ತೆಟಿಕ್ (ಇಂದ್ರಿಯಾನುಭವ) ಎಂಬ ಗ್ರೀಕ್ ಪದದ ಮೂಲಾರ್ಥದಲ್ಲಿ ಉಪಯೋಗಿಸಿರುತ್ತಾನೆ. ಈಸ್ತೆಟಿಕ್ ಎಂಬ ಮೊದಲ ಭಾಗದಲ್ಲಿ ಇಂಧ್ರಿಯಾನುಭವದ ತಳಹದಿಯ ಭಾವನಾರೂಪಗಳನ್ನು ವಿವರಿಸಿರುತ್ತಾನೆ. ಇಂದ್ರಿಯಾನುಭವದ ತಳಹದಿಯ ಭಾವನಾರೂಪಗಳು ಎರಡು-ದೇಶ ಅಥವಾ ಆಕಾಶ, ಮತ್ತು ಕಾಲ. ನಮಗೆ ಯಾವ ಬಗೆಯಾದ ಇಂದ್ರಿಯಾನುಭವವಾಗಲಿ ಸಾಧ್ಯವಾಗಬೇಕಾದರೆ ಇಂದ್ರಿಯಗಳು ಒದಗಿಸಿದ ಮುದ್ರೆಗಳನ್ನು ದೇಶ ಕಾಲ ಭಾವನಾರೂಪಗಳು ಒಂದುಗೂಡಿಸಬೇಕು. ಕಣ್ಣಿನಿಂದ ನೋಡಿದ ಎಲ್ಲವೂ ಒಂದು ಆಕಾರ ಪಡೆದು ಒಂದು ಸ್ಥಳದಲ್ಲಿಯೇ ಒಂದು ಕಾಲದಲ್ಲಿ ಇದ್ದಂತೆ ನಮಗೆ ಅನುಭವವಾಗುತ್ತದೆ. ದೇಶಕಾಲಗಳ ಸಂಬಂಧವಿಲ್ಲದೆ ನಮಗೆ ಇಂದ್ರಿಯ ಪ್ರತ್ಯಕ್ಷಜ್ಞಾನ ಅಸಾಧ್ಯ. ಈ ವಿಚಾರದಲ್ಲಿ ಹಿಂದಿನ ತಾತ್ತ್ವಿಕರು ಎರಡು ಬಗೆಯಾದ ಉತ್ತರಗಳನ್ನೂ ಕೊಟ್ಟಿದ್ದರು. ಅನುಭವಪ್ರಧಾನವಾದಿ ಹ್ಯೂಂ ಪ್ರತ್ಯಕ್ಷಾನುಭವವಾಗಬೇಕಾದರೆ ಮೊದಲು ಬಿಡಿಬಿಡಿಯಾದ ಅನೇಕ ಇಂದ್ರಿಯಗಳ ಮುದ್ರೆಗಳು ಬರಬೇಕು, ಅನಂತರ ಹೀಗೆ ಬಂದ ಬಿಡಿಬಿಡಿ ಮುದ್ರೆಗಳು ಸಾಹಚರ್ಯದ ಮೂಲಕ ಸೇರುತ್ತವೆ-ಎಂದು ಹೇಳಿದ. ಬುಧ್ಯಾರೂಢವಾದಿಗಳಾದ ವುಲ್ಫ್ ಮತ್ತು ಬಾಮ್ ಗಾರ್ಟನರು ಪ್ರತ್ಯಕ್ಷಜ್ಞಾನ ಅಸ್ಪಷ್ಟವಾದ ಇಂದ್ರಿಯಗಳ ಮುದ್ರೆಗಳಿಂದ ಕುಲಷಿತವಾಗುತ್ತದೆಯಾದ್ದರಿಂದ ಅದನ್ನು ಬುದ್ಧಿಗೆ ಆಂತರಿಕವಾಗಿ ಬುದ್ಧಿಯಲ್ಲಿ ಅಡಗಿರುವ ದೇಶ ಕಾಲ ಭಾವನೆಗಳಿಂದ ಪ್ರತ್ಯೇಕಗೊಳಿಸಿ ಸ್ಪಷ್ಟಗೊಳಿಸಬೇಕು-ಎಂದು ಹೇಳಿದರು. ಮಾನಸಿಕ ಭಾವನೆಗಳನ್ನು ಬಿಟ್ಟು ಮೊದಲೇ ಇಂದ್ರಿಯಗಳ ಬಿಡಿ ಮುದ್ರೆಗಳು ಇರುವುದಿಲ್ಲ. ಬುದ್ಧಿಯ ಭಾವನೆಗಳು ಕೂಡ ಇಂದ್ರಿಯಗಳ ಮುದ್ರೆಗಳ ಸಂಪರ್ಕವಿಲ್ಲದೆ ತಾವೇತಾವಾಗಿ ಬುದ್ಧಿಯಲ್ಲಿ ಹುದುಗಿರುವುದಿಲ್ಲ-ಎಂದು ಕಾಂಟ್ ಎರಡು ಪಕ್ಷಗಳನ್ನೂ ಖಂಡಿಸಿ, ಇಂದ್ರಿಯಗಳ ಮುದ್ರೆಗಳು, ಬುದ್ಧಿಯ ಭಾವನೆಗಳು ಒಂದಕ್ಕೊಂದು ಸೇರಿದಂತೆಯೇ ಪ್ರತ್ಯಕ್ಷ ಜ್ಞಾನದಲ್ಲಿರುತ್ತವೆ; ಬುದ್ಧಿ, ಭಾವನೆಗಳ ಸಂಪರ್ಕವಿಲ್ಲದ ಇಂದ್ರಿಯಗಳ ಮುದ್ರೆಗಳು ಕುರುಡು, ಇಂದ್ರಿಯಗಳ ಮುದ್ರೆಗಳ ಸಂಪರ್ಕವಿಲ್ಲದ ಬುದ್ಧಿಯ ಭಾವನೆಗಳು ಜಳ್ಳು-ಎಂಬ ವಿಚಾರಪಕ್ಷವನ್ನು ಮಂಡಿಸಿದ. ಕ್ರಿಟೀಕ್ ಆಫ್ ಪ್ಯೂರ್ ರೀಸನಿನ ಮೊದಲಮುದ್ರಣದಲ್ಲಿ ಕಾಂಟನ ನಿಲವು ಇಷ್ಟು ಸ್ಪಷ್ಟ ಮತ್ತು ನಿರ್ದಿಷ್ಟವಾಗಿರಲಿಲ್ಲ. ಆದರೆ ಅದರ ಎರಡನೆಯ ಮುದ್ರಣದಲ್ಲಿ ಕಾಂಟ್ ಅದನ್ನು ನಿಸ್ಸಂದೇಹಕರವಾಗಿ ಸ್ಪಷ್ಟಪಡಿಸಿದ. ಕಾಂಟನ ಕಾಲದಲ್ಲಿ ಪ್ರತಿಜ್ಞೆಗಳನ್ನು ಆಂತರಿಕ ಪ್ರತಿಜ್ಞೆಗಳು (ಅಪ್ರಿಯೊರಿ ಜಜ್‍ಮೆಂಟ್ಸ್) ಮತ್ತು ಅನುಭವಜನ್ಯ ಪ್ರತಿಜ್ಞೆಗಳು (ಸಿಂಪತೆಟಿಕ್ ಜಜ್‍ಮೆಂಟ್ಸ್) ಎಂದು ವಿಭಾಗ ಮಾಡುತ್ತಿದ್ದರು. ಪ್ರತಿಜ್ಞೆಯ ವಿಶೇಷ್ಯ ಪದದಲ್ಲೇ (ಸಬ್ಜೆಕ್ಟ್ ಟರ್ಮ್) ವಿಶೇಷಣ ಪದ (ಪ್ರೆಡಿಕೇಟ್ ಟರ್ಮ್) ಅಡಗಿರುವುದು ಆಂತರಿಕ ಪ್ರತಿಜ್ಞೆಯ ಲಕ್ಷಣ. ಉದಾಹರಣೆಗೆ, ತ್ರಿಭುಜ ಮೂರು ಭುಜಗಳುಳ್ಳದ್ದು ಎಂಬ ಪ್ರತಿಜ್ಞೆಯಲ್ಲಿ ತ್ರಿಭುಜ ಎಂಬ ವಿಶೇಷ್ಯದಲ್ಲಿ ಮೂರು ಭುಜಗಳು ಎಂಬ ವಿಶೇಷಣ ಅಡಗಿದೆ. ಇಂಥ ಪ್ರತಿಜ್ಞೆಗಳು ಪೂರ್ಣವಾಗಿ ನಿಶ್ಚಿತ ಪ್ರತಿಜ್ಞೆಗಳು. ಏಕೆಂದರೆ ಈ ಪ್ರತಿಜ್ಞೆಗಳಲ್ಲಿ ವಿಶೇಷ್ಯಕ್ಕೂ ವಿಶೇಷಣಕ್ಕೂ ಅಗತ್ಯಸಂಬಂಧವಿದೆ. ಅನುಭವ ಪ್ರತಿಜ್ಞೆಗಳಲ್ಲಾದರೋ ವಿಶೇಷ್ಯಕ್ಕೂ ವಿಶೇಷಣಕ್ಕೂ ಇಂಥ ಅಗತ್ಯ ಸಂಬಂಧವಿಲ್ಲದಿರುವುದಿಲ್ಲ. ಆ ಪ್ರತಿಜ್ಞೆಗಳಲ್ಲಿ ವಿಶೇಷ್ಯ ಪದದಲ್ಲೇ ವಿಶೇಷಣವೂ ಅಗತ್ಯವಾಗಿ ಅಡಗಿರುವುದಿಲ್ಲ. ಉದಾಹರಣೆಗೆ, ಈ ಅದುರಿನಲ್ಲಿ ಕಬ್ಬಿಣವಿದೆ ಎಂಬ ಅನುಭವಪ್ರತಿಜ್ಞೆಯಲ್ಲಿ, ಅದುರು ಎಂಬ ವಿಶೇಷ್ಯಕ್ಕೆ ಕಬ್ಬಿಣ ಎಂಬ ವಿಶೇಷಣ ಆಂತರಿಕವಲ್ಲ. ಅದುರು ಎಂದ ಮಾತ್ರಕ್ಕೇ ಅದು ಕಬ್ಬಿಣದ್ದು ಎಂದು ಅಗತ್ಯವಾಗಿ ಹೇಳಲಾಗುವುದಿಲ್ಲ. ಅದನ್ನು ಅನುಭವದ ಮೂಲಕವೇ ಹೊಸದಾಗಿ ಕಂಡುಹಿಡಿಯಬೇಕಾಗುತ್ತದೆ. ನಮ್ಮ ಜ್ಞಾನ ಅನುಭವದೊಂದಿಗೆ ಪ್ರಾರಂಭವಾಗುತ್ತದೆ ಎಂಬ ಅನುಭವವಾದಿಗಳ ನಿಲವನ್ನು ಕಾಂಟ್ ಒಪ್ಪಿಕೊಂಡ. ಆದರೆ ನಮ್ಮ ಜ್ಞಾನ ಕೇವಲ ಅನುಭವದಿಂದಲೇ ಅವತರಿಸಿದ್ದಲ್ಲ. ನಮ್ಮ ಮನಸ್ಸಿನ ಚಟುವಟಿಕೆ ಮತ್ತು ರೂಪಗಳಿಗೆ ಒಳಪಟ್ಟ ವಿನಾ ಅನುಭವ ಅರ್ಥರಹಿತವಾದ ರೂಪುರಹಿತವಾದ ಗೊಂದಲವಾಗುತ್ತದೆ. ಅನುಭವದಲ್ಲಿ ಕ್ರಮ ಕಾಣುವುದು ಬುದ್ಧಿಯ ಭಾವನೆಗಳ ಪ್ರಭಾವದಿಂದ. ಆದ್ದರಿಂದ ನಮ್ಮ ಜ್ಞಾನ ಕೇವಲ ಆಂತರಿಕ ಪ್ರತಿಜ್ಞಾರೂಪವೂ ಅಲ್ಲ ಅಥವಾ ಕೇವಲ ಅನುಭವಜನ್ಯ ಅನುಭವ ಪ್ರತಿಜ್ಞಾರೂಪವೂ ಅಲ್ಲ. ಅದು ಆಂತರಿಕ ಭಾವನೆಗಳ ಮತ್ತು ಅನುಭವಗಳ ಸಮನ್ವಯ ಪ್ರತಿಜ್ಞೆ (ಅಪ್ರಿಯೊರಿ ಸಿಂಪತೆಟಿಕ್ ಜಜ್‍ಮೆಂಟ್). ಏಳು ಮತ್ತು ಐದು ಸೇರಿದರೆ ಹನ್ನೆರಡಾಗುತ್ತದೆ ಎಂಬ ಅಂಕಗಣಿತ ಪ್ರತಿಜ್ಞೆ ಆಂತರಿಕ ಮತ್ತು ಅನುಭವಗಳ ಸಮನ್ವಯ ಪ್ರತಿಜ್ಞೆ. ಏಳು ಮತ್ತು ಐದು ಎಂಬ ಅಂಶಗಳನ್ನು ಎಷ್ಟು ವಿಧದಲ್ಲಿ ವಿಭಜಿಸಿದರೂ ನಮಗೆ ಹನ್ನೆರಡು ಎಂಬ ಸಂಖ್ಯೆಯ ಅರಿವಾಗುವುದಿಲ್ಲ. ಆ ಅರಿವು ಉಂಟಾಗಲು ಮಾನಸಿಕ ಸಮನ್ವಯ ಕ್ರಿಯೆ ಅಗತ್ಯ. ಈ ಅಂಕಗಣಿತ ಪ್ರತಿಜ್ಞೆಯಂತೆ 'ನೇರವಾದ ಗೆರೆ ಎರಡು ಬಿಂದುಗಳ ಮಧ್ಯೆ ಇರುವ ಅತ್ಯಂತ ಕನಿಷ್ಠ ದೂರ ಎಂಬ ರೇಖಾಗಣಿತ ಪ್ರತಿಜ್ಞೆಯೂ ಎಷ್ಟೇ ಬದಲಾವಣೆ ಹೊಂದಿದರೂ ಭೌತದ್ರವ್ಯದ ಮೊತ್ತ ಒಂದೇ ಆಗಿರುತ್ತದೆ ಎಂಬ ಭೌತಶಾಸ್ತ್ರದ ಪ್ರತಿಜ್ಞೆಯೂ ಅನುಭವ ಮತ್ತು ಆಂತರಿಕ ಭಾವನೆಗಳ ಸಮನ್ವಯ ಪ್ರತಿಜ್ಞೆಗಳು. ಗಣಿತಶಾಸ್ತ್ರದ ಪ್ರತಿಜ್ಞೆಗಳು ದೇಶ ಕಾಲವೆಂಬ ಆಂತರಿಕ ಭಾವನೆಗಳ ಮೂಲಕ ಸಾಧ್ಯವಾದುದು ಹೇಗೆ ಎಂಬುದನ್ನು ಈಸ್ತೆಟಿಕ್ ನಲ್ಲಿ ಕಾಂಟ್ ವಿವರಿಸಿದ್ದಾನೆ. ಕಾಂಟ್ ಮನಸ್ಸಿನ ಶಕ್ತಿಗಳನ್ನು ಇಂಟ್ಯೂಷನ್, ಅಂಡರ್ ಸ್ಟ್ಯಾಂಡಿಂಗ್, ರೀಸನ್-ಎಂದು ಮೂರಾಗಿ ವಿಭಾಗ ಮಾಡಿರುತ್ತಾನೆ. ವಿಷಯಗಳನ್ನು ತರ್ಕಿಸದೆ ನೇರವಾಗಿ ಸಾಕ್ಷಾತ್ತಾಗಿ ತಿಳಿಯುವ ಶಕ್ತಿ ಮೊದಲನೆಯದು. ಅದನ್ನು ಇಂಟ್ಯೂಷನ್ ಎಂದು ಕರೆದಿರುತ್ತಾನೆ. ಇಂಟ್ಯೂಷನಿನಲ್ಲಿ ಎರಡು ಬಗೆ. ಮಾನವನ ಮನಸ್ಸು ನೇರವಾಗಿ ವಿಷಯವನ್ನು ಅಂಗೀಕರಿಸುವಂತೆ ಮಾಡುವ ಶಕ್ತಿ ಒಂದು. ಇದರ ಮೂಲಕ ಗ್ರಹಿಸಿದ ವಿಷಯ ಮಾನವನ ಮನಸ್ಸಿಗೆ ಹೊರತಾದದ್ದು. ಇನ್ನೊಂದು ಬಗೆಯ ಇಂಟ್ಯೂಷನ್‍ಗೆ ವಿಷಯ ಹೊರತಾದುದಲ್ಲ. ಅದನ್ನು ಕಾಂಟ್ ಇಂಟಲೆಕ್ಚುಅಲ್ ಇಂಟ್ಯೂಷನ್ ಎಂದು ಕರೆದಿದ್ದಾನೆ. ಇದು ಮಾನವಾತೀತ ಶಕ್ತಿ. ವಿಷಯವನ್ನು ನೇರವಾಗಿ ಅರಿತಕಾಲದಲ್ಲೇ ವಿಷಯ ಸೃಷ್ಟಿಯಾಗಿ ಅಸ್ತಿತ್ವಕ್ಕೆ ಬರುತ್ತದೆ. ಈ ಶಕ್ತಿ ಸೃಷ್ಟಿಕರ್ತನಾದ ಈಶ್ವರನಿಗೆ ಮಾತ್ರ ಸಾಧ್ಯ. ಇದು ಸೃಷ್ಟ್ಯಾತ್ಮಕ ದರ್ಶನಶಕ್ತಿ. ಮಾನವನ ದರ್ಶನ ಶಕ್ತಿ ಹೀಗೆ ಸೃಷ್ಟ್ಯಾತ್ಮಕವಲ್ಲ. ಅರಿತ ವಿಷಯ ಅದರಿಂದ ಸೃಷ್ಟಿಯಾದದ್ದಲ್ಲ. ಅದನ್ನು ಅದು ಅಂಗೀಕರಿಸುತ್ತದೆಯಾದುದರಿಂದ ಅದಕ್ಕೆ ಅದು ಅಧೀನ. ಹೀಗೆ ಅಧೀನವಾದ ಮಾನಸಿಕ ಶಕ್ತಿ ವಿಷಯವನ್ನು ಇದ್ದದ್ದನ್ನು ಇದ್ದಹಾಗೆಯೇ ತಿಳಿಯುವಂತಿಲ್ಲ. ಈಶ್ವರನಂತೆ. ಅದು ಮಾನವನ ಮನಸ್ಸಿಗೆ ಅಂತರಿಕವಾದ ದೇಶ ಕಾಲ ರೂಪಗಳ ಮೂಲಕ ಇಂದ್ರಿಯ ಗೋಚರವಾಗಬೇಕು. ದೇಶ ಬಾಹ್ಯೇಂದ್ರಿಯ ರೂಪ, ಕಾಲ ಅಂತಃಕರಣ ರೂಪ. ಮೊದಲನೆಯದರ ಮೂಲಕ ಹೊರವಸ್ತುಗಳ ತಿಳಿವು ಉಂಟಾಗುತ್ತದೆ; ಎರಡನೆಯದರ ಮೂಲಕ ಆತ್ಮದ ಅರಿವು ಉಂಟಾಗುತ್ತದೆ. ವಿಷಯಗಳು ತಾವಿದ್ದಂತೆಯೇ ಮಾನವನ ತಿಳಿವಿಗೆ ಬರಬೇಕು. ಆದ್ದರಿಂದ ನಮ್ಮ ಅರಿವಿನ ವಿಷಯಗಳು ಕೋರಿಕೆಗಳು ಮಾತ್ರವೇ ಹೊರತು ಪಾರಮಾರ್ಥಿಕ ವಿಷಯಗಳಲ್ಲ. ಪಾರಮಾರ್ಥಿಕ ವಿಷಯಗಳು ನಮಗೆ ಅತೀತವಾದುವು. ನಮ್ಮ ಅರಿವಿಗೆ ಬರುವ ವಿಷಯಗಳು ಕೋರಿಕೆಗಳಾದರೂ ಭ್ರಮೆಗಳಲ್ಲ. ಅವು ನಮ್ಮ ಅನುಭವ ಪ್ರಪಂಚಕ್ಕೆ ಅಂಗಭೂತವಾದವು. ನಿಯಮಿತವಾದವು. ನಮ್ಮ ಮನಸ್ಸಿಗೆ ಅಂತರಿಕವಾದ ಈ ದೇಶ ಕಾಲ ರೂಪಗಳು ಅನಿರ್ದಿಷ್ಟವಾದ ಇಂದ್ರಿಯಗಳ ಮುದ್ರೆಗಳನ್ನು ನಿರ್ದಿಷ್ಟರೂಪಗಳಾಗಿ ವಿನ್ಯಾಸಗೊಳಿಸುತ್ತವೆ. ಟ್ರಾನ್ಸೆಂಡೆಂಟಲ್ ಅನಲಿಟಿಕ್[ಬದಲಾಯಿಸಿ] ಎಂಬ ಎರಡನೆಯ ಭಾಗದಲ್ಲಿ ಕಾಂಟ್ ಮನಸ್ಸಿನ ಎರಡನೆಯ ಶಕ್ತಿಯಾದ ಬುದ್ಧಿಶಕ್ತಿಯ ಮೂಲಕ ನಮಗೆ ಭೌತವಸ್ತುಗಳ ಅರಿವುಂಟಾಗುತ್ತದೆ ಎಂಬುದನ್ನು ವಿವರಿಸಿದ್ದಾನೆ. ಬುದ್ಧಿಶಕ್ತಿಯ ರೂಪಗಳನ್ನು ಇಂದ್ರಿಯಶಕ್ತಿರೂಪಗಳಿಂದ ಪ್ರತ್ಯೇಕಿಸಲು ಅವುಗಳನ್ನು ವಿಕಲ್ಪಗಳೆಂದು (ಕ್ಯಾಟಗೊರೀಸ್) ಕರೆದಿರುತ್ತಾನೆ. ವಿಕಲ್ಪಗಳು ಭೌತವಸ್ತುಗಳ ತಿಳಿವಿಗೆ ಅಗತ್ಯ ಎಂಬುದನ್ನು ಮೊದಲು ವಿವರಿಸಿ ಅನಂತರ ಅವುಗಳ ಸಂಖ್ಯೆ ಎಷ್ಟು, ವೈಶಿಷ್ಟ್ಯವೇನು ಎಂಬುದನ್ನು ವಿಚಾರಮಾಡಿರುತ್ತಾನೆ. ಮೊದಲ ವಿವರಣೆಯನ್ನು ಟ್ರಾನ್ಸೆಂಡೆಂಟಲ್ ಡಿಡಕ್ಷನ್ ಎಂದೂ ಎರಡನೆಯ ವಿವರಣೆಯನ್ನು ಮೆಟಫಿಸಿಕಲ್ ಡಿಡಕ್ಷನ್ ಎಂದೂ ಕರೆದಿದ್ದಾನೆ. ಟ್ರಾನ್ಸೆಂಡೆಂಟಲ್ ಡಿಡಕ್ಷನ್ ಇಂದ್ರಿಯಾನುಭವದ ವಿಷಯದಿಂದ ಅಲಭ್ಯವಾದ ದೇಶ ಕಾಲಗಳಿಗೆ ಒಳಪಟ್ಟ ರೂಪ ಸಮುದಾಯದಿಂದ ಪ್ರಾರಂಭಿಸಿ ಅವುಗಳಲ್ಲಿ ಬುದ್ಧಿಯ ಮೂಲಕ ಬಿಕ್ಕಟ್ಟು ಹೇಗೆ ಏರ್ಪಡುತ್ತದೆ ಎಂಬುದನ್ನು ವಿಶದಪಡಿಸುತ್ತದೆ. ಬುದ್ಧಿಯ ವಿಕಲ್ಪಗಳಿಂದ ಒಂದು ಗೂಡಿಸಲ್ಪಟ್ಟದ್ದನ್ನು ಕಾಂಟ್ ಜ್ಞಾನದ ವಿಷಯವೆಂದು ಕರೆದಿರುತ್ತಾನೆ. ದೇಶಕಾಲಗಳಿಗೆ ಒಳಪಟ್ಟ ರೂಪಗಳು ಇಂದ್ರಿಯಾನುಭವಕ್ಕೆ ಆಂತರಿಕವಾಗಿರುವಂತೆ ವಿಕಲ್ಪಗಳು ಬೌದ್ಧಿಕಜ್ಞಾನಕ್ಕೆ ಆಂತರಿಕವಾದುವು. ಇಂದ್ರಿಯದ ರೂಪ ಸಮುದಾಯ ವೈಜ್ಞಾನಿಕ ವಿಷಯವಾಗಿ ಪರಿವರ್ತನೆಯಾಗುವುದಕ್ಕೆ ನಾನು ಆಲೋಚಿಸುತ್ತೇನೆ ಎಂಬ ಆತ್ಮ ಚೇತನ ಅತ್ಯಗತ್ಯವಾದ ತಳಹದಿ. ಇಂದ್ರಿಯ ರೂಪಗಳು ಬಿಡಿ ಬಿಡಿಯಾದುವು (ಪರ್ಟಿಕುಲರ್) ಮತ್ತು ಆಗಂತುಕವಾದುವು (ಕಂಟಿಂಜೆಂಟ್). ಬುದ್ಧಿಯ ವಿಕಲ್ಪಗಳಾದರೋ ಸಾಮಾನ್ಯಗಳು (ಯೂನಿವರ್ಸಲ್) ಮತ್ತು ಅಗತ್ಯ (ನೆಸೆಸರಿ) ಸ್ವಭಾವವುಳ್ಳವು. ಹೀಗೆ ಪರಸ್ಪರ ವಿಷಮವಾದಂಥವು ಸೇರುವುದು ಹೇಗೆ ಎಂಬ ಪ್ರಶ್ನೆ ಉದ್ಭವಿಸುತ್ತದೆ. ಇವೆರಡರ ಮಧ್ಯೆ ಇರುವ ಕಂದರವನ್ನು ಹೋಗಲಾಡಿಸಿ, ಒಂದರಿಂದ ಇನ್ನೊಂದಕ್ಕೆ ಹಾಯಲು ಕಾಂಟ್ ಪ್ರತಿಭೆಯ ನೆರವನ್ನು ಕೋರಿದ್ದಾನೆ. ಇಂದ್ರಿಯ ರೂಪಗಳನ್ನು ಪ್ರತಿಭೆ ಒಂದುಗೂಡಿಸಿದಾಗ ಪ್ರತಿಭೆಯಿಂದ ಸಂಘಟ್ಟಿತವಾದ ಆ ರೂಪ ಇಂದ್ರಿಯ ರೂಪಗಳಂತೆ ಮೂರ್ತ ಸ್ವರೂಪವನ್ನೂ ವಿಕಲ್ಲಗಳಂತೆ ಸಾಮಾನ್ಯಗಳ ಸ್ವರೂಪವನ್ನೂ ಪಡೆದಿರುತ್ತಾದ್ದರಿಂದ ಒಂದರಿಂದ ಒಂದಕ್ಕೆ ಸರಾಗವಾಗಿ ಹಾಯಲೂ ಅವೆರಡಕ್ಕೂ ಸಮೀಪ ಸಂಬಂಧವನ್ನು ಏರ್ಪಡಿಸಲೂ ಯೋಗ್ಯವಾದ ಮಧ್ಯವರ್ತಿಯಾಗುತ್ತದೆ. ಕಾಂಟ್ ಇಲ್ಲಿ ಒಡ್ಡಿರುವ ಸಮಸ್ಯೆ ತುಂಬ ಕೃತಕವಾಗಿ ಕಾಣುತ್ತದೆ. ಅದನ್ನು ಬಗೆಹರಿಸಲು ಈತ ಕೊಟ್ಟಿರುವ ಸಲಹೆಯೂ ಅಷ್ಟೇ ಕೃತಕ. ಕಾಂಟನ ಈ ಗೊಂದಲಕ್ಕೆ ಮುಖ್ಯವಾಗಿ ಕಾರಣಗಳು ಎರಡು: 1 ಜ್ಞಾನವಿಷಯಕ್ಕೆ ಸಂಬಂಧಪಟ್ಟ ಇವನ ಮೂಲಭೂತ ಭಾವನೆಗಳು, 2 ಜ್ಞಾತೃವಿನ ಮನಸ್ಸಿಗೆ ಸಂಬಂಧಪಟ್ಟ ಭಾವನೆಗಳು. ಜ್ಞಾನದ ವಿಷಯಗಳು ತೋರಿಕೆಗಳು. ವಾಸ್ತವ ವಸ್ತುಗಳು ಇವುಗಳಿಗೆ ಹೊರತಾದುವು. ಅವುಗಳ ಮುದ್ರೆಗಳು ಬಿಡಿಬಿಡಿಯಾಗಿ ಕಾಣಿಸಿಕೊಳ್ಳುತ್ತವೆ-ಎಂಬ ಭಾವನೆ ನಮ್ಮ ಅನುಭವಕ್ಕೆ ವ್ಯತಿರಿಕ್ತವಾದದ್ದು. ವಾಸ್ತವ ವಿಷಯಗಳು ಬಿಡಿಬಿಡಿಯಾಗಿ ಕಾಣಿಸಿಕೊಂಡು ಅವು ಬರಿಯ ತೋರಿಕೆಗಳಾದರೆ ಅವುಗಳ ವಿಷಯವಾಗಿ ನಾವು ನಿಜವಾದ ಜ್ಞಾನವನ್ನು ಪಡೆಯಲಾಗುವುದಿಲ್ಲ. ಸಾಮಾನ್ಯ ಅನುಭವದಲ್ಲಿ ಸಾಮಾನ್ಯಗಳನ್ನು ಬಿಟ್ಟು ವಿಶೇಷಗಳಾಗಲೀ ವಿಶೇಷಗಳನ್ನು ಬಿಟ್ಟು ಸಾಮಾನ್ಯಗಳಾಗಲೀ ಇರುವುದಿಲ್ಲ. ವಿಕಲ್ಪಗಳ ನೆರವಿಲ್ಲದ ಪ್ರತ್ಯಕ್ಷ ಕುರುಡು, ಪ್ರತ್ಯಕ್ಷದ ನೆರವಿಲ್ಲದ ವಿಕಲ್ಪ ಜೊಳ್ಳು-ಎಂಬುದನ್ನು ಕಾಂಟ್ ಹೇಳಿರುತ್ತಾನಾದರೂ ಆ ಭಾವನೆಯನ್ನು ಕೆಲವು ವೇಳೆ ಮರೆತುಬಿಡುತ್ತಾನೆ. ನಮ್ಮ ಮನಸ್ಸು ಇಂದ್ರಿಯಗಳ ಮುದ್ರೆಗಳನ್ನು ಪಡೆಯುವಾಗ ಜಡವಾಗಿರುತ್ತದೆ; ಅವನ್ನು ವಿಕಲ್ಪಗಳಿಂದ ಒಂದುಗೂಡಿಸುವಾಗ ಚುರುಕಾಗಿರುತ್ತದೆ-ಎಂಬ ಭಾವನೆಯೂ ಮನಶ್ಯಾಸ್ತ್ರಕ್ಕೆ ವ್ಯತಿರಿಕ್ತವಾದದ್ದು. ಒಂದುಗೂಡಿಸುವ ಚೇತನ ನಮ್ಮ ಅನುಭವದಲ್ಲಿ ಮೊದಲಿನಿಂದ ಕಾರ್ಯಕಾರಿಯಾಗಿರುತ್ತದೆ. ಒಂದುಗೂಡಿಸುವ ಶಕ್ತಿ ಮನಸ್ಸಿಗೆ ಮೂಲ ಭೂತವಾಗಿರದಿದ್ದರೆ ಯಾವ ಉಪಾಯದಿಂದಲೂ ವಸ್ತುಜ್ಞಾನಕ್ಕೆ ಅಗತ್ಯವಾದ ಒಕ್ಕಟ್ಟನ್ನು ಹುಟ್ಟಿಹಾಕುವುದಕ್ಕಾಗುವುದಿಲ್ಲ. ಅಲ್ಲದೆ ಕಾಂಟನ ವಿವರಣೆಯಲ್ಲಿ ಇಂಟ್ಯೂಷನ್ ಮತ್ತು ಇಮ್ಯಾಜಿನೇಷನ್‍ಗಳ ಪಾತ್ರ ಸಂದಿಗ್ಧವಾಗಿದೆ. ಅನಲಿಟಿಕ್ ಭಾಗದಲ್ಲಿ ಪ್ರತಿಭೆ (ಇಮ್ಯಾಜಿನೇಷನ್) ವಿಕಲ್ಪಗಳಿಗೆ ಅಧೀನವಾಗಿರುವಂತೆ ವರ್ಣಿತವಾಗಿದೆ. ವಿಜ್ಞಾನದಲ್ಲಿ ಪ್ರತಿಭೆಯ ಪಾತ್ರ ಯಾವ ಬಗೆಯದು. ಕಲೆಯಲ್ಲಿ ಅದರ ಪಾತ್ರ ಯಾವ ಬಗೆಯದು ಎಂಬುದೂ ಸ್ಪಷ್ಟವಾಗಿಲ್ಲ. ಟ್ರಾನ್ಸೆಂಡೆಂಟಲ್ ಡಿಡಕ್ಷನ್ನಿನಲ್ಲಿ ವಿಕಲ್ಪಗಳ ಸಾಮಾನ್ಯ ಸ್ವರೂಪವನ್ನು ವಿವರಿಸಿ ಯಾದ ಮೇಲೆ ಮೆಟಫಿಸಿಕಲ್ ಡಿಡಕ್ಷನ್ ಎಂಬ ಮುಂದಿನ ಭಾಗದಲ್ಲಿ ಕಾಂಟ್ ಆ ವಿಕಲ್ಪಗಳು ಯಾವುವು ಅವುಗಳ ಸಂಖ್ಯೆ ಎಷ್ಟು ಎಂಬುದನ್ನು ನಿರ್ಧರಿಸಲು ಪ್ರಯತ್ನ ಪಟ್ಟಿರುತ್ತಾನೆ. ಭೌತ ವಸ್ತುವಿನ ಜ್ಞಾನಕ್ಕೆ ವಿಕಲ್ಪಗಳು ಯಾವುವು ಎಂಬುದಕ್ಕೆ ವಿಜ್ಞಾನದಲ್ಲಿ ಬಳಸುವ ವಿವಿಧ ಪ್ರತಿಜ್ಞೆಗಳು ಆಧಾರ. ಈ ಪ್ರತಿಜ್ಞೆಗಳನ್ನು ವಿಭಜಿಸಿದರೆ ಅವುಗಳ ತಳಹದಿಯಾದ ವಿಕಲ್ಪಗಳು ಯಾವವು ಮತ್ತು ಎಷ್ಟು ಎಂಬುದು ಸ್ಪಷ್ಟವಾಗುತ್ತದೆ. ಹಿಂದಿನಿಂದ ತಾರ್ಕಿಕರು ವಿಂಗಡಿಸಿರುವ ಪ್ರತಿಜ್ಞೆಗಳ ಸಂಖ್ಯೆ ಹನ್ನೆರಡು. ಅವುಗಳಲ್ಲಿ ಒಂದೊಂದನ್ನೂ ವಿಭಜಿಸಿ ನೋಡಿದಾಗ ಅವುಗಳ ತಳಹದಿಯಾದ ವಿಕಲ್ಪಗಳು ಹೊರಬೀಳುತ್ತವೆ. ಒಂದೊಂದು ಪ್ರತಿಜ್ಞೆಗೂ ಸಮಾನಾಂತರವಾದ ವಿಕಲ್ಪಗಳನ್ನು ಕೆಳಗಿನ ಪಟ್ಟಿ ತೋರಿಸುತ್ತದೆ. ಪ್ರತಿಜ್ಞೆಗಳು ವಿಕಲ್ಪಗಳು ಅಥವಾ ಚಿಂತನೆಯ ಬಗೆಗಳು ಅ. ಪರಿಮಾಣ ಅ. ಪರಿಮಾಣ ಸಾಮಾನ್ಯ ಪ್ರತಿಜ್ಞೆ ಏಕತೆ ಪ್ರತ್ಯೇಕ ಪ್ರತಿಜ್ಞೆ ಅನೇಕತೆ ವೈಯತ್ತಿಕ ಪ್ರತಿಜ್ಞೆ ಸಂಪೂರ್ಣತೆ ಆ. ಗುಣ ಆ. ಗುಣ ಅಸ್ತ್ಯರ್ಥಕ ಪ್ರತಿಜ್ಞೆ ಅಸ್ತಿತ್ವ ನಾಸ್ತ್ಯರ್ಥಕ ಪ್ರತಿಜ್ಞೆ ನಾಸ್ತಿತ್ತ್ವ ಅನಂತ ಪ್ರತಿಜ್ಞೆ ಪರಿಮಿತಿ ಇ. ಸಂಬಂಧ ಇ. ಸಂಬಂಧ ನಿರುಪಾಧಿಕ ಪ್ರತಿಜ್ಞೆ ಸಮವಾಯ ಔಪಾಧಿಕ ಪ್ರತಿಜ್ಞೆ ಆಧೀನ್ಯ ಪಕ್ಷಾಂತರ ಪ್ರತಿಜ್ಞೆ ಸಾಮೂಹಿಕ (ಪರಸ್ಪರತೆ) ಈ. ರೀತಿ ಈ. ರೀತಿ ಸಂಭಾವ್ಯ ಪ್ರತಿಜ್ಞೆ ಸಾಧ್ಯತೆ ಸ್ಥಿರೀಕರಣ ಪ್ರತಿಜ್ಞೆ ವಾಸ್ತವತೆ ಅಗತ್ಯ ಪ್ರತಿಜ್ಞೆ ಅಗತ್ಯತೆ   ಕಾಂಟ್ ಅನಂತರ ಬಂದ ತಾತ್ತ್ವಿಕರು ಈ ವಿಕಲ್ಪಗಳ ಬಗೆಗಳ ಸಂಖ್ಯೆಯನ್ನು ಹೆಚ್ಚಿಸಿರಬಹುದು ಅಥವಾ ಕಡಿಮೆ ಮಾಡಿರಬಹುದು. ಆದರೆ ನಾವು ಲಕ್ಷಿಸಬೇಕಾದುದು ಇವನ ಮುಖ್ಯ ನಿಲವನ್ನು. ಈ ಬಗೆಗಳು ನಿಗಮದಿಂದಾಗಲೀ ಅನುಗಮನದಿಂದಾಗಲೀ ಪಡೆದುವಲ್ಲ. ಇವು ಕೇವಲ ಅನುಭವದಿಂದ ಅನುಗಮನದ ಮೂಲಕ ಸಂಗ್ರಹಿಸಿದವಲ್ಲ. ಇವನ್ನು ಬಿಟ್ಟು ಯಾವುದೊಂದು ಅನುಭವದ ಚಿಂತನವೂ ಸಾಧ್ಯವಿಲ್ಲ. ಅನುಭವವನ್ನು ಬಿಟ್ಟು ಇವು ತಾವೇ ತಾವಾಗಿ, ಅದಕ್ಕೆ ಹೊರತಾಗಿಯೂ ಇರುವುದಿಲ್ಲ. ಇವು ಎಲ್ಲ ಬಗೆಯ ವಾಸ್ತವ ಆಲೋಚನೆಗೆ ಆಂತರಿಕವಾಗಿ ಅಗತ್ಯಭಾವನೆಗಳು. ಟ್ರಾನ್ ಸೆಂಡೆಂಟಲ್ ಡಯಲೆಕ್ಟಿಕ್[ಬದಲಾಯಿಸಿ] ಬುದ್ಧಿಯ ವಿಕಲ್ಪಗಳು ಇಂದ್ರಿಯಗಳ ಮುದ್ರೆಗಳನ್ನು ಜ್ಞಾನವಿಷಯವಾಗಿ ಪರಿವರ್ತಿಸುವ ಚೇತನಕ್ಕೆ ಸೀಮಿತವಾದವುವಾದರೂ ಅವು ಇಂದ್ರಿಯಾನುಭವದಿಂದ ಬೇರೆಯಾಗಿ ಸ್ವತಂತ್ರವಾದ ತಾರ್ಕಿಕ ರೂಪಗಳಾಗಿರಬಹುದು. ಇಂದ್ರಿಯಾನುಭವದಿಂದ ಬೇರೆಯಾಗಿ ಶುದ್ಧ ತಾರ್ಕಿಕ ರೂಪಗಳಿಂದ ನಮಗೆ ವಿಷಯ ಜ್ಞಾನ ಲಭಿಸದಿದ್ದರೂ ಅವನ್ನು ಶುದ್ಧರೂಪದಲ್ಲಿ ಯೋಚಿಸಬಹುದು; ತರ್ಕಿಸಬಹುದು. ಹೀಗೆ ವಿಷಯಚೇತನದಿಂದ ಪ್ರತ್ಯೇಕವಾದ ಅತೀತವಾದ ಶುದ್ಧರೂಪಗಳನ್ನು ಯೋಚಿಸಬಲ್ಲ ವಿಚಾರ ಚೇತನವನ್ನು ಕಾಂಟ್ ರೀಸನ್ ಎಂದು ಕರೆದಿರುತ್ತಾನೆ. ಈ ವಿಚಾರಚೇತನ ಮಾನವನನ್ನು ಪರತತ್ತ್ವ ಜಿಜ್ಞಾಸದ (ಮೆಟಫಿಸಿಕಲ್ ಸ್ಪೆಕ್ಯುಲೇಷನ್) ಕಡೆಗೆ ಒಯ್ಯುತ್ತದೆ. ಇಂದ್ರಿಯಾನುಭವದಿಂದ ಬಿಡುಗಡೆಹೊಂದಿದ ವಿಚಾರಚೇತನದ ರೂಪಗಳನ್ನು ವಿಷಯಚೇತನದ ವಿಕಲ್ಪಗಳಿಂದ (ಕಾನ್ಸೆಪ್ಟ್ಸ್ ಆಫ್ ಅಂಡರ್ ಸ್ಟ್ಯಾಂಡಿಂಗ್) ಪ್ರತ್ಯೇಕಿಸಲು ಅವನ್ನು ಐಡಿಯಾಸ್ ಆಫ್ ರೀಸನ್ ಎಂದು ಕಾಂಟ್ ಕರೆದಿದ್ದಾನೆ. ಇಲ್ಲಿ ಐಡಿಯಾಸ್ ಎಂಬ ಪದಕ್ಕೆ ಐಡಿಯಲ್ಸ್ ಅಂದರೆ ಧ್ಯೇಯಗಳು ಎಂಬ ಅರ್ಥ ಬರುತ್ತದೆ. ವಿಷಯಗಳು (ಆಬ್ಜೆಕ್ಟ್ಸ್) ಇಂದ್ರಿಯಾನುಭವಕ್ಕೆ ಅಧೀನವಾದುವು. ಆದರೆ ವಿಚಾರಚೇತನದ ಧ್ಯೇಯಗಳಾದ ಐಡಿಯಾಸ್, ಇಂದ್ರಿಯಾತೀತ ಭಾವನೆಗಳು. ವಿಷಯಚೇತನದ ವಸ್ತುಗಳು ತೋರಿಕೆಗಳು (ಫೆನೋಮೆನ). ವಿಚಾರಚೇತನದ ವಸ್ತುಗಳಾದರೋ ಪರಸತ್ ವಸ್ತುಗಳು (ನೌಮೆನ). ಈ ಪರಸತ್ ವಿಷಯಗಳಿಗೆ ವಿಷಯ ಚೇತನದ ವಸ್ತುಗಳಂತೆ ಇಂದ್ರಿಯಗಳ ಮುದ್ರೆಗಳ ಆಶ್ರಯವಿಲ್ಲದ್ದರಿಂದ ಅವನ್ನು ವಿಷಯಚೇತನದ ವಸ್ತುಗಳಂತೆ ತಿಳಿಯಲಾಗದಿದ್ದರೂ ಅವುಗಳ ಬಗ್ಗೆ ಯೋಚಿಸಬಹುದು. ಇಂದ್ರಿಯಾತೀತ ಭಾವನೆಗಳ (ನೌಮೆನಲ್ ಕಾನ್ಸೆಪ್ಟ್ಸ್) ಮೂಲಕ ಅಂಥ ಪರವಸ್ತುಗಳನ್ನು ಯೋಚಿಸಬಹುದು. ಈ ಅತೀತ ಭಾವನೆಗಳು ವಿಚಾರಚೇತನದ ವಿಕಲ್ಪಗಳಂತೆ ನಿರ್ದಿಷ್ಠವಲ್ಲ; ಸಂದಿಗ್ಧ ಅಥವ ಅನಿಶ್ಚಿತ. ಏಕೆಂದರೆ ಅವುಗಳಿಗೆ ಹೊಂದಿಕೆಯಾಗುವ ಇಂದ್ರಿಯ ಮುದ್ರೆಗಳಿಲ್ಲ; ಅವುಗಳಿಗೆ ಸಮಾನಾಂಥರವಾದ ವಾಸ್ತವ ವಿಷಯಗಳಿಲ್ಲ. ಈ ಅತೀತ ಭಾವನೆಗಳು (ಧ್ಯೇಯಗಳು) ವಿಷಯಜ್ಞಾನವನ್ನು ಕೊಡದಿದ್ದರೂ ಅವುಗಳಿಂದ ಪ್ರಯೋಜನವಿಲ್ಲದಿಲ್ಲ. ಇಂದ್ರಿಯಾನುಭವದಿಂದ ಸಜ್ಜುಗೊಂಡ ಭೌತ ವಿಷಯಗಳಾದ ತೋರಿಕೆಗಳು ಮಾತ್ರವೇ ಪ್ರಕೃತ ಮತ್ತು ಸತ್ಯ. ನಮ್ಮ ಜೀವನ ಸರ್ವಸ್ವವೂ ಸಂಪೂರ್ಣವಾಗಿ ಭೌತವಿಜ್ಞಾನದ ಆಳ್ವಿಕೆಗೆ ಒಳಪಡಬೇಕು ಎಂಬ ಭೌತವಾದವನ್ನು ತಡೆಗಟ್ಟುವುದಲ್ಲದೆ ಮಾನವೀಯ ನೀತಿ ಮತ್ತು ಮತಭಾವನೆಗಳಿಗೆ ದಾರಿಮಾಡಿಕೊಡುತ್ತವೆ. ವಿಚಾರಚೇತನ ದೃಢವಾದದ್ದು ಅದು ತಪ್ಪು ಅಥವಾ ಮಿಥ್ಯಾಭಾವನೆಗಳಿಗೆ ಎಡೆಕೊಡಬೇಕಾದ್ದಿಲ್ಲ. ಅದು ತೋರಿಕೆಯ ವ್ಯಾವಹಾರಿಕ ಪ್ರಪಂಚದಿಂದ ಬಿಡುಗಡೆಹೊಂದಿ ನಿಯಂತ್ರಣ ಅಥವಾ ಆದೇಶಿ (ರೆಗ್ಯುಲೆಟಿವ್ ಪ್ರಿನ್ಸಿಪಲ್) ತತ್ತ್ವವಾಗಿ ವರ್ತಿಸಬಹುದು. ವಿಜ್ಞಾನದ ತೋರಿಕೆಗಳನ್ನು ಮತ್ತಷ್ಟು ಸಂಗತವಾಗಿ ಮತ್ತು ವ್ಯಾಪಕವಾಗಿ ಒಂದು ಗೂಡಿಸುವಂತೆ ಬುದ್ಧಿಗೆ ಅಥವಾ ವಿಷಯಚೇತನಕ್ಕೆ ಆದೇಶ ಕೊಡಬಹುದು. ಹಾಗೆ ಆದೇಶತತ್ತ್ವವಾಗಿ ವರ್ತಿಸಿದಾಗ ಅದು ತನ್ನ ನಿಜಧರ್ಮಕ್ಕೆ ಅನುಗುಣವಾಗಿ ವರ್ತಿಸುತ್ತದೆ ಮತ್ತು ಸಫಲವಾಗುತ್ತದೆ. ಬುದ್ಧಿಗೆ ಆದೇಶ ಕೊಡುವ ಬದಲು ತನ್ನ ಭಾವನೆಗಳು ವಾಸ್ತವ ವಿಷಯಗಳ ಜ್ಞಾನವೆಂದು ಸಾಧಿಸಲು ಪ್ರಯತ್ನಪಟ್ಟರೆ ಮಿಥ್ಯಾಭಾವನೆಗಳಿಗೆ ಮತ್ತು ಪರಸ್ಪರ ವಿರುದ್ಧ ಭಾವನೆಗಳಿಗೆ ಎಡೆಯಾಗುತ್ತದೆ. ವಿಚಾರಚೇತನದ ಭಾವನೆಗಳು ಮೂರು-ಆತ್ಮ, ಪ್ರಕೃತಿ ಮತ್ತು ಈಶ್ವರ. ಈ ಭಾವನೆಗಳನ್ನು ಆದೇಶ ತತ್ತ್ವಗಳಾಗಿ ಉಪಯೋಗಿಸಿದಾಗ ಅವು ಸುಖಕರವಾದ ಭಾವನೆಗಳಾಗುತ್ತವೆ. ಅದರ ಬದಲು ವುಲ್ಫ್ ಮತ್ತು ಇತರ ತಾತ್ತ್ವಕರು ಭಾವಿಸಿದಂತೆ ಆತ್ಮವನ್ನು ವೈಚಾರಿಕ ಆತ್ಮವಿಜ್ಞಾನದ (ರ್ಯಾಷನಲ್ ಸೈಕಾಲಜಿ) ವಿಷಯವಾಗಿಯೂ ಪ್ರಕೃತಿಯನ್ನು ವೈಚಾರಿಕ ವಿಶ್ವಶಾಸ್ತ್ರದ (ರ್ಯಾಷನಲ್ ಕಾಸ್ಮಾಲಜಿ) ವಿಷಯವಾಗಿಯೂ ಈಶ್ವರನನ್ನು ವೈಚಾರಿಕ ದೇವತಾಶಾಸ್ತ್ರದ (ರ್ಯಾಷನಲ್ ಥಿಯಾಲಜಿ) ವಿಷಯವಾಗಿಯೂ ಭಾವಿಸಿದರೆ ಅವು ಮಿಥ್ಯಾವಾದಗಳಿಗೆ ಎಡೆ ಕೊಡುತ್ತವೆ. ಆತ್ಮಕ್ಕೆ ಸಂಬಂಧಪಟ್ಟ ಮಿಥ್ಯಾವಾದಗಳನ್ನು ಪ್ಯಾರಲಾಜಿಸಮ್ಸ್ ಆಫ್ ಪ್ಯೂರ್ ರೀಸನ್ ಎಂದೂ ವಿಶ್ವಕ್ಕೆ ಸಂಬಂಧಪಟ್ಟ ಮಿಥ್ಯಾವಾದಗಳನ್ನು ಆಂಟಿನೊಮೀಸ್ ಆಫ್ ಪ್ಯೂರ್ ರೀಸನ್ ಎಂದೂ ಈಶ್ವರನಿಗೆ ಸಂಬಂಧಪಟ್ಟ ಮಿಥ್ಯಾವಾದಗಳನ್ನು ಐಡಿಯಲ್ ಆಫ್ ಪ್ಯೂರ್ ರೀಸನ್ ಎಂದೂ ಕಾಂಟ್ ಕರೆದಿದ್ದಾನೆ. ಅ) ಪ್ಯಾರಲಾಜಿಸಮ್ಸ್ : ಆತ್ಮ ಒಂದು ದ್ರವ್ಯ ಎಂಬುದನ್ನು ತೋರಿಸಲು ಉಪಯೋಗಿಸುವ ತರ್ಕಗಳು; ಅನಿಶ್ಚಿತ ಮಧ್ಯಮ ಪದದ ದೋಷಕ್ಕೆ (ಫ್ಯಾಲಸಿ ಆಫ್ ದಿ ಆಂಬಿಗ್ಯುಅಸ್ ಮಿಡ್ಲ್ ಟರ್ಮ್) ಒಳಪಡುತ್ತವೆ ಎಂಬುದನ್ನು ಕಾಂಟ್ ಈ ಅನುಮಾನ ವಾಕ್ಯದ (ಸಿಲೊಜಿಸಮ್) ಮೂಲಕ ಸ್ಪಷ್ಟಪಡಿಸಿದ್ದಾನೆ. ಪ್ರಮಾತೃವಾಗಿ (ಸಬ್ಜಕ್ಟ್) ಅಲ್ಲದೆ ಬೇರೆ ವಿಧವಾಗಿ ಯೋಚಿಸಲಾಗದ್ದು ಒಂದು ದ್ರವ್ಯವಾಗಿ ಇದ್ದೇ ಇರಬೇಕು. ಯೋಚಿಸುವ ವ್ಯಕ್ತಿಯನ್ನು ಪ್ರಮಾತೃವಾಗಿ ಅಲ್ಲದೆ ಬೇರೆಯಾಗಿ ಯೋಚಿಸಲಾಗುವುದಿಲ್ಲ. ಆದ್ದರಿಂದ ಅದು ಪ್ರಮಾತೃವಾಗಿ, ಅಂದರೆ ದ್ರವ್ಯವಾಗಿ ಮಾತ್ರ ಇರುತ್ತದೆ. ಮೊದಲಿನ ಪ್ರತಿಜ್ಞೆಯಲ್ಲಿ ಪ್ರಮಾತೃವಾಗಿ ಅಲ್ಲದೆ ಬೇರೆಯಾಗಿ ಆಲೋಚಿಸಲಾಗ್ಯದ ಎಂಬ ಮಧ್ಯಪದವೇ ಬೇರೆ ಎರಡನೆಯ ಪ್ರತಿಜ್ಞೆಯಲ್ಲಿರುವ ಯೋಚಿಸುವ ವ್ಯಕ್ತಿ ಎಂಬ ಪದವೇ ಬೇರೆ. ಯೋಚಿಸುವ ವ್ಯಕ್ತಿ ಯೋಚನೆಯ ವಿಷಯ ಆದ್ದರಿಂದ ಅದು ಹ್ಯೂಂ ಹೇಳಿದಂತೆ, ಯಾವಾಗಲೂ ಒಂದನ್ನೊಂದು ನಿರಂತರವಾಗಿ ಹಿಂಬಾಲಿಸುವ ಮಾನಸಿಕ ಸ್ಥಿತಿಯಾಗಿ ಅಲ್ಲದೆ ಒಂದು ದ್ರವ್ಯವಾಗಿ ತೋರಿಸಿಕೊಳ್ಳುವುದಿಲ್ಲ. ಈ ಚಿತ್ತವೃತ್ತಿ ಕಾಲರೂಪಕ್ಕೆ ಒಳಪಟ್ಟಿದೆಯಾದ್ದರಿಂದ ಯಾವುದಾದರೊಂದು ಇಂದ್ರಿಯಾನುಭವಕ್ಕೆ ಸೇರಿದಂತೆಯೇ ಇರುವುದರಿಂದ ಅದು ಒಂದು ತೋರಿಕೆಯ ವಿಷಯವೇ ಹೊರತು, ವಾಸ್ತವ ದ್ರವ್ಯವಲ್ಲ. ಆತ್ಮ ಒಂದು ವಾಸ್ತವದ್ರವ್ಯವಾಗಿ ನಮ್ಮ ಜ್ಞಾನದ ವಿಷಯವಾಗಲಾರದು. ಈ ಕಾರಣದಿಂದ ವಾಸ್ತವದ್ರವ್ಯವನ್ನು ತನ್ನ ವಿಷಯವಾಗಿ ಇಟ್ಟುಕೊಂಡಿರುವ ವೈಚಾರಿಕ ಆತ್ಮಶಾಸ್ತ್ರ ಅಸಾಧುವಾಗಿತ್ತದೆ. ಈ ವಾದ ಸಮಂಜಸವಾಗಿ ತೋರುವುದಿಲ್ಲ. ಪ್ರತ್ಯಕ್ಷ ಜ್ಞಾನವೆಲ್ಲವೂ ಇಂದ್ರಿಯ ಪ್ರತ್ಯಕ್ಷವಾಗಿಯೇ ಇರಬೇಕು ಎಂದು ಕಾಂಟ್ ಭಾವಿಸಿದ್ದಾನೆ. ಇಂದ್ರಿಯ ಪ್ರತ್ಯಕ್ಷವಲ್ಲದೆ ಮಾನಸಿಕ ಪ್ರತ್ಯಕ್ಷವಿದೆ (ನಾನ್ ಸೆಂಸ್ಯುಆಸ್ ಪರ್ಸೆಪ್ಷನ್) ಎಂದು ನಂಬುವ ತಾತ್ತ್ವಕರು, (ಉದಾಹರಣೆಗೆ, ಆಲ್ ಪ್ರೆಢ್ ನಾತ ವೈಟ್ಹೆಡ್ ಮತ್ತು ಅರ್ನೆಸ್ಟ್ ಕ್ಯಾಸೀರರ್) ಈ ವಾದವನ್ನು ಒಪ್ಪುವುದಿಲ್ಲ. ಇಂದ್ರಯಾತೀತ ಆತ್ಮವನ್ನು ಒಪ್ಪಿದರೂ ಕಾಂಟ್ ಮಂಡಿಸಿರುವ ಜ್ಞಾನಮೀಮಾಂಸೆಯ ಪ್ರಕಾರ ಅದು ಭೌತವಸ್ತುವಿನಂತೆ ಇದೆ ಎಂದು ಹೇಳಲಾಗುವುದಿಲ್ಲ. ಇಂದ್ರಿಯಾತೀತ ಆತ್ಮ ನಮ್ಮ ನೀತಿಯ ನಿಷ್ಠೆಯಿಂದ ಸಾಧಿಸಿ ಬೆಳೆಸಬೇಕಾದ ಧ್ಯೇಯವೆಂದು ಮಾತ್ರ ಹೇಳಬಹುದು. ಆಗ ಅದು ನಮ್ಮ ನಡತೆಯನ್ನು ನಿಯಂತ್ರಿಸುವ ತತ್ತ್ವವಾಗಿ ಮಾತ್ರ ಪರಿಗಣಿಸಲ್ಪಡುತ್ತದೆ. ಆ) ಆಂಟಿನೋಮೀಸ್ ಆಫ್ ಪ್ಯೂರ್ ರೀಸನ್ ಎಂದರೆ ಒಂದೇ ಭಾವನೆಯನ್ನು ಹಿಂದಕ್ಕೂ ಮುಂದಕ್ಕೂ ಲಂಬಿಸಿದಾಗ ಎರಡು ಪರಸ್ಪರ ವಿರುದ್ಧ ಪ್ರತಿಜ್ಞೆಗಳಾಗಿ ಪರಿಣಾಮಗೊಳ್ಳುವ ಸ್ಥಿತಿ. ಈ ವಿಷಯ ಪರಿಸ್ಥಿತಿ ಆತ್ಮದ ವಿಚಾರಕ್ಕಿಂತ ವಿಶ್ವದ ವಿಚಾರದಲ್ಲಿ ಸ್ಪಷ್ಟವಾಗಿ ಎದ್ದುನಿಲ್ಲುತ್ತದೆ. ಪರಿಮಾಣ, ಗುಣ, ಸಂಬಂಧ, ರೀತಿ ಈ ನಾಲ್ಕು ವಿಕಲ್ಪಗಳನ್ನು ಹಿಂದಕ್ಕೂ ಮುಂದಕ್ಕೂ ಲಂಭಿಸಿದಾಗ ನಾಲ್ಕು ಜೊತೆ ಪರಸ್ಪರ ವಿರುದ್ಧ ಪ್ರತಿಜ್ಞೆಗಳು ಉದ್ಭವಿಸುತ್ತವೆ. ಈ ಪರಸ್ಪರವಿರುದ್ಧ ಪ್ರತಿಜ್ಞೆಗಳಲ್ಲಿ ಮೊದಲನೆಯದನ್ನು ಥೀಸೀಸ್ ಎಂದೂ ಎರಡನೆಯದನ್ನು ಆಂಟಿಥೀಸೀಸ್ ಎಂದೂ ಕಾಂಟ್ ಕರೆದಿದ್ದಾನೆ. ಥೀಸೀಸ್ ಬುಧ್ಯಾರೂಢವಾದಿಗಳ ನಿಲವನ್ನೂ ಆಂಟಿಥೀಸೀಸ್ ಅನುಭವ ಪ್ರಧಾನವಾದಿಗಳ ನಿಲವನ್ನೂ ಪ್ರತಿನಿಧಿಸುತ್ತವೆ. ಪರಿಣಾಮಕ್ಕೆ ಸಂಬಂಧಪಟ್ಟ ವಿರುದ್ಧಪ್ರತಿಜ್ಞೆಗಳು: ಥೀಸೀಸ್ (ಪ್ರಮೇಯ)-ವಿಶ್ವಕ್ಕೆ ಹುಟ್ಟುಇದೆ; ಅದರ ದೇಶ ವ್ಯಾಪ್ತಿ ಪರಿಮಿತವಾದದ್ದು. ಆಂಟಿಥೀಸೀಸ್ ಪ್ರತಿಪ್ರಮೇಯ-ವಿಶ್ವಕ್ಕೆ ಹುಟ್ಟಿಲ್ಲ; ಅದು ಅನಂತ. ಗುಣಕ್ಕೆ ಸಂಬಂಧಪಟ್ಟ ವಿರುದ್ಧ ಪ್ರತಿಜ್ಞೆಗಳು: ಥೀಸೀಸ್-ಸಂಕೀರ್ಣವಸ್ತು ಸರಳವಾದ ವಸ್ತುಗಳಿಂದ ಕೂಡಿದೆ. ಆಂಟಿಥೀಸೀಸ್-ಪ್ರಕೃತಿಯಲ್ಲಿ ಸರಳವಸ್ತುಗಳಿಲ್ಲ. ಸಂಬಂಧಕ್ಕೆ ಸಂಬಂಧಪಟ್ಟ ವಿರುದ್ಧ ಪ್ರತಿಜ್ಞೆಗಳು: ಥೀಸೀಸ್-ನಿಯತಿಗೆ ಒಳಪಟ್ಟ ವಿಶ್ವಕ್ಕೆ ನಿಯತಿ ನಿಯಮರಹಿತ ಸ್ವತಂತ್ರ ತತ್ತ್ವ ತಳಹದಿಯಾಗಿರಬೇಕು. ಆಂಟಿಥೀಸೀಸ್-ಕಾರಣಪ್ರಪಂಚದಲ್ಲಿ ಸ್ವತಂತ್ರ ತತ್ತ್ವಕ್ಕೆ ಅವಕಾಶವಿಲ್ಲ. ರೀತಿಗೆ ಸಂಬಂಧಪಟ್ಟ ವಿರುದ್ಧಪ್ರತಿಜ್ಞೆಗಳು: ಥೀಸೀಸ್-ಸೋಪಾಧಿಕವಾದುದಕ್ಕೆ ನಿರುಪಾಧಿಕವಾದದ್ದು ಆಶ್ರಯವಾಗಿರಬೇಕು. ಆಂಟಿಥೀಸೀಸ್-ಇಂಥ ನಿರುಪಾಧಿಕವಸ್ತು ವಿಶ್ವದಲ್ಲಾಗಲಿ ಅದರ ಹೊರಗಾಗಲಿ ಇರಬಾರದು. ಈ ವಿರುದ್ಧ ಪ್ರತಿಜ್ಞೆಗಳನ್ನು ಕಾಂಟ್ ಮಂಡಿಸಿದ ಉದ್ದೇಶ ಬುದ್ಧಿಪ್ರಧಾನವಾದ ಮತ್ತು ಅನುಭವ ಪ್ರಧಾನವಾದಗಳು ಅಸಂಗತವೆಂದು ತೋರಿಸಿ ತನ್ನ ವೈಚಾರಿಕ ನಿಲವನ್ನು ಸ್ಥಾಪಿಸುವುದಕ್ಕಾಗಿ. ವಿಶ್ವಕ್ಕೆ ಸಂಬಂಧಪಟ್ಟ ಬುದ್ಧಿಪ್ರಧಾನವಾದಿಗಳ ಪ್ರತಿಜ್ಞೆ ಯೋಚಿಸಲು ಅರ್ಹವಾದ ಧ್ಯೇಯ ಮಾತ್ರವಾಗಿ ಇರಬಹುದು. ಆದರೆ ಅದು ಜ್ಞಾನವಿಷಯವಾಗಿ ಇರಲಾರದು. ಧ್ಯೇಯ ಜ್ಞಾನವಿಷಯವಲ್ಲ; ಆಸ್ಥೆ ಅಥವಾ ಶ್ರದ್ಧೆಯ ವಿಷಯ. 'ನಾನು ಆ ಜ್ಞಾನವನ್ನು ನಿರಾಕರಿಸಿದ ಕಾರಣ, ಶ್ರದ್ಧಾಭಕ್ತಿಗೆ ದಾರಿಮಾಡಿ ಕೊಡುವುದಕ್ಕಾಗಿ' ಎಂದು ಸಾರಿ ಕಾಂಟ್ ತನ್ನ ಅಭಿಮತವನ್ನು ಸ್ಪಷ್ಟಪಡಿಸಿರುತ್ತಾನೆ. ವೈಚಾರಿಕ ಮತಶಾಸ್ತ್ರ[ಬದಲಾಯಿಸಿ] ಟ್ರಾನ್ಸೆಂಡೆಂಟಲ್ ಡಯಲೆಕ್ಟಿನ ಮೊದಲ ಭಾಗದಲ್ಲಿ ಕಾಂಟ್ ಈಶ್ವರ ಭಾವನೆಯನ್ನು ಸ್ಥಾಪಿಸಲು ಮಂಡಿಸಿರುವ ವಾದಗಳನ್ನು ವಿರ್ಮರ್ಶಿಸಿದ್ದಾನೆ. ಈ ವಾದಗಳು ಮೂರು: 1 ಆಂಟೋಲಾಜಿಕಲ್ (ಅಸ್ತಿತ್ವಕ್ಕೆ ಸಂಬಂಧಪಟ್ಟದ್ದು), 2 ಕಾಸ್ಮೋಲಾಜಿಕಲ್ (ವಿಶ್ವಕ್ಕೆ ಸಂಬಂಧಪಟ್ಟದ್ದು) ಮತ್ತು 3 ಥಿಯೋಲಾಜಿಕಲ್ (ಮತಕ್ಕೆ ಸಂಬಂಧಪಟ್ಟದ್ದು). ಒಂದು ವಸ್ತು ಪರಿಪೂರ್ಣವೆಂದು ಭಾವಿಸಬೇಕಾದರೆ ಅಸ್ತಿತ್ವ ಅದರ ಲಕ್ಷಣಗಳಲ್ಲಿ ಒಂದಾಗಿ ಇರಬೇಕಾದದ್ದು. ಅಸ್ತಿತ್ವ ಇಲ್ಲದ್ದು ಪರಿಪೂರ್ಣವಾಗಿರಲು ಹೇಗೆ ಸಾಧ್ಯ ಪರಿಪೂರ್ಣವಾದ ಈಶ್ವರಭಾವನೆಯಲ್ಲಿ ಅಸ್ತಿತ್ವ ಸೇರಿರುತ್ತಾದ್ದರಿಂದ, ಅಸ್ತಿತ್ವವನ್ನು ಬಿಟ್ಟು ಯೋಚಿಸಲಾಗದ್ದರಿಂದ ಈಶ್ವರನ ಇರವು ಸ್ವತಃಸಿದ್ಧ. ಪರಮ ಪರಿಪೂರ್ಣತೆಯ ಭಾವನೆಗೆ ಅಸ್ತಿತ್ವ ಅಗತ್ಯ. ಅಂಥ ಈಶ್ವರನನ್ನು ವಿಚಾರಚೇತನ ಒಂದು ಧ್ಯೇಯವಾಗಿ ಭಾವಿಸಬಹುದು. ಹಾಗೆ ಭಾವಿಸುವುದರಲ್ಲಿ ಅಸಾಂಗತ್ಯವಿಲ್ಲ. ಆದರೆ ಆ ಭಾವನೆಗೆ ಸಂವಾದಿಯಾಗಿ ಒಂದು ಇದ್ದೇ ಇರಬೇಕು ಎಂದು ಹೇಳಲಾಗುವುದಿಲ್ಲ. ಒಂದು ತ್ರಿಭುಜವಿದ್ದರೆ ಅದರಲ್ಲಿ ಮೂರುಕೋನಗಳು ಇರಬೇಕು. ತ್ರಿಭುಜಭಾವನೆ ಮೂರು ಕೊನಗಳು ಎಂಬ ಭಾವನೆಯನ್ನು ಒಳಗೊಂಡಿರುತ್ತದೆ ಎಂಬುದು ಸ್ವತಃಸಿದ್ಧ ಪ್ರತಿಜ್ಞೆ. ಆದರೆ ತ್ರಿಭುಜ ಇದ್ದೇಇದೆ ಎಂಬುದು ಸತಃಸಿದ್ಧ ಪ್ರತಿಜ್ಞೆಯಲ್ಲ. ಆದ್ದರಿಂದ ಈ ವಾದ ಅಸಮರ್ಪಕವೆಂದು ಕಾಂಟ್ ತಳ್ಳಿಹಾಕಿರುತ್ತಾನೆ. ಇದು ಅಸ್ತಿತ್ವಕ್ಕೆ ಸಂಬಂಧಪಟ್ಟ ವಿವರ. ಎರಡನೆಯ ಮತ್ತು ಮೂರನೆಯ ಕಾಸ್ಮೋಲಾಜಿಕಲ್ ಮತ್ತು ಥಿಯೋಲಾಜಿಕಲ್ ವಾದಗಳನ್ನು ಇಲ್ಲಿ ವಿಸ್ತರಿಸಲು ಅವಕಾಶವಿಲ್ಲ. ಒಟ್ಟಿನಲ್ಲಿ ಇವುಗಳಲ್ಲೂ ಆಂಟೊಲಾಜಿಕಲ್ ವಾದದ ದೋಷಗಳೇ ಕಾಣುತ್ತವೆ. ಆಗಂತುಕವಾದದ್ದು ಎಂಬ ಭಾವನೆ ಅಗತ್ಯವಾದದ್ದು ಎಂಬ ಭಾವನೆಗೆ ದಾರಿ ಮಾಡಿಕೊಡುತ್ತದೆ. ಈ ಎರಡು ಭಾವನೆಗಳೂ ಸಾಧ್ಯ. ಆದರೆ ಅಗಂತುಕವಾದುದಕ್ಕೆ ಸಂವಾದಿಯಾದ ವಿಷಯಗಳಿವೆ. ಅಗತ್ಯವಾಗಿ ಇರಲೇಬೇಕಾದ್ದು ಎಂಬ ಭಾವನೆಗೆ ಸಂವಾದಿಯಾದ ವಿಷಯವಿರಲೇಬೇಕು ಎಂಬುದು ನಮ್ಮ ಜ್ಞಾನಕ್ಕೆ ಮೀರಿದ್ದು. ಸಾಧಾರಣವಾಗಿ ಎಲ್ಲ ಮತಗಳೂ ಈಶ್ವರಭಾವನೆಯನ್ನು ಆದರಿಸಿವೆ. ಇದು ನಿಜ. ಆದರೆ ಆ ಭಾವನೆಗೆ ಸಂವಾದಿಯಾದ ವಿಷಯಜ್ಞಾನವಿದೆಯೆಂಬುದು ಚರ್ಚಾಸ್ಪದ. ಈಶ್ವರನಲ್ಲಿ ಭಕ್ತಿ ಇದೆ. ಇದು ಭಕ್ತಿಯ ವಿಷಯವಾಗಿ ಜನರ ಜೀವನವನ್ನು ಸತ್ತ್ವಯುತವಾಗಿ ಮಾಡಿದೆ. ಆದರೆ ಇದು ಒಂದು ಧ್ಯೇಯವಾಗಿ, ಭಕ್ತಿಪುಂಜವಾದ ಭಾವನೆಯಾಗಿ ಪರಿಣಾಮಕಾರಿಯಾಗಿದೆಯೇ ಹೊರತು. ಜ್ಞಾನನಿಷ್ಠೆಗೆ ಪಾತ್ರವಾದುದಲ್ಲ ಎಂಬುದು ಕಾಂಟನ ತೀರ್ಮಾನ. ಕ್ರಿಟೀಕ್ ಆಫ್ ಪ್ರ್ಯಕ್ಟಿಕಲ್ ರೀಸನ್[ಬದಲಾಯಿಸಿ] ಮೇಲಿನ ತೀರ್ಮಾನವನ್ನು ವಿಸ್ತರಿಸಲು ಕ್ರಿಟೀಕ್ ಆಫ್ ಪ್ರ್ಯಾಕ್ಟಿಕಲ್ ರೀಸನ್ ಎಂಬ ತನ್ನ ಎರಡನೆಯ ಮಹಾಗ್ರಂಥವನ್ನು ಕಾಂಟ್ ಬರೆದಿದ್ದಾನೆ. ಮೊದಲ ಕ್ರಿಟೀಕಿನಲ್ಲಿ ಗಣಿತ ಮತ್ತು ಭೌತಶಾಸ್ತ್ರಗಳ ತಳಹದಿಯ ಅಂತರಿಕ ಭಾವನೆಗಳನ್ನು ವಿಶಪಡಿಸಿದಂತೆ ಎರಡನೆಯ ಕ್ರಿಟೀಕಿನಲ್ಲಿ ನೀತಿ ಶಾಸ್ತ್ರದ ತಳಹದಿಯ ಆಂತರಿಕ ಭಾವನೆಗಳನ್ನು ವಿಶದಪಡಿಸಲು ಪ್ರಯತ್ನ ಮಾಡಿದ್ದಾನೆ. ಅದು ವಿಚಾರಮಾಡುವ ವಿಷಯಗಳು ಇವು. ಅ) ನೀತಿಯ ಕಾನೂನು ನೀತಿಜೀವನದ ವಾಸ್ತವ ವಿಷಯ. ಆ) ಸತ್ ಸಂಕಲ್ಪ 1 ಪರಿಪೂರ್ಣವಾದ ಪವಿತ್ರವಾದ ಸಂಕಲ್ಪ 2 ಕರ್ತವ್ಯ ಭಾವನೆಗೆ ಒಳಪಟ್ಟ ಮಾನವ ಸಂಕಲ್ಪ. ಇ) ಕೇವಲ ಕರ್ತವ್ಯ ನಿಯಮ ಪಾಲನೆ ಅಥವಾ ಅದರ ವಿಚಾರವಾಗಿ ಗೌರವ ಭಾವನೆಯೇ ನೀತಿ ನಡೆವಳಿಕೆಯ ಉದ್ದೇಶ. ಈ) ಕಡ್ಡಾಯವಾದ ನಿಯೋಗ (ಕೆಟಗಾರಿಕಲ್ ಇಂಪರೆಟಿವ್). 1 ನಿಷ್ಕಾಮ 2 ವ್ಯಕ್ತಿಗಳು ಸ್ವಾತ್ಮವನ್ನೇ ಧ್ಯೇಯವಾಗಿ ಉಳ್ಳವರು 3 ವ್ಯಕ್ತಿಗಳು ಧ್ಯೇಯಪ್ರಪಂಚದ ಸದಸ್ಯರು. ಉ) ನೀತಿಸಂಕಲ್ಪ ಸ್ವಯಂನಿಯೋಜ್ಯ; ಪರಕೀಯ ಆಶೋತ್ತರಗಳಿಗೆ ಬದ್ಧವಲ್ಲ. ಊ) ನೈತಿಕ ವಿಚಾರ ಚೇತನದ ಅಧಾರಭಾವನೆಗಳು-1 ಸ್ವಾತಂತ್ರ್ಯ, 2 ಅಮೃತತ್ವ 3 ಈಶ್ವರ. ನೀತಿನಿಯಮಗಳು ವಾಸ್ತವಸಂಗತಿಗಳು. ಮಾಡಬೇಕಾದದ್ದು, ಬಿಡಬೇಕಾದದ್ದು ಎಂಬ ಸಾಮಾನ್ಯ ನಿಯಮ ಎಲ್ಲ ಜನಾಂಗಗಳಲ್ಲೂ ಕಂಡುಬರುತ್ತದೆ. ಯಾವುದನ್ನು ವಾಡಬೇಕು ಯಾವುದನ್ನು ಬಿಡಬೇಕು ಎಂಬ ವಿಚಾರದಲ್ಲಿ ಭಿನ್ನತೆ ಇರಬಹುದು. ಆದರೆ ಅನಾಗರಿಕನಿಗಾಗಲಿ ನಾಗರಿಕನಿಗಾಗಲಿ, ಶಾಸ್ತ್ರ ತಿಳಿದವನಿಗಾಗಲಿ ತಿಳಿಯದವನಿಗಾಗಿ ಕರ್ತವ್ಯ (ಅಂದರೆ ಮಾಡಬೇಕಾದದ್ದು) ಎಂಬ ಸಾಮಾನ್ಯ ನಿಯಮದ ವಿಚಾರದಲ್ಲಿ ಭಿನ್ನಾಭಿಪ್ರಾಯವಿಲ್ಲ. ಅದರ ತಳಹದಿಯಾದ ಸಾಮಾನ್ಯ ಭಾವನೆಗಳನ್ನು ಹೊರಹಾಕುವುದು ನೈತಿಕ ವಿಚಾರಚೇತನದ ಕೆಲಸ. ಈ ಭಾವನೆಗಳಿಗೆ ಇಂದ್ರಿಯಾನುಭವ ಆಶ್ರಯವಲ್ಲ. ಅವು ನೈತಿಕಚೇತನಕ್ಕೆ ಆಂತರಿಕವಾದುವು. ಈ ನೈತಿಕಚೇತನದ ಆದೇಶವನ್ನು ಪರೀಕ್ಷಿಸಿದಾಗ, ಸತ್ ಸಂಕಲ್ಪವನ್ನು ಬಿಟ್ಟರೆ ಈ ವಿಶ್ವದಲ್ಲಿ ಒಳ್ಳೆಯದು ಎಂಬುದು ಬೇರೆ ಯಾವುದೂ ಆಗಲಾರದು ಎಂಬುದು ಸ್ಪಷ್ಟವಾಗುತ್ತದೆ. ತನ್ನ ನಿಯಮದ ವಿಚಾರವಾಗಿ ಇರುವ ಗೌರವಭಾವನೆಯಿಂದಲ್ಲದೆ, ಐಶ್ವರ್ಯ, ಯಶಸ್ಸು ಮುಂತಾದ ಯಾವುದನ್ನೂ ಬಯಸುವ ಸಂಕಲ್ಪ ಒಳ್ಳೆಯದೆನ್ನಿಸಿಕೊಳ್ಳಲು ಅರ್ಹವಲ್ಲ. ಸತ್ ಸಂಕಲ್ಪವನ್ನು ಕಾಂಟ್ ಎರಡಾಗಿ ವಿಂಗಡಿಸಿದ್ದಾನೆ. ಒಂದು-ಪರಿಪೂರ್ಣವಾದ ಪವಿತ್ರಸಂಕಲ್ಪ. ಇಂಥ ಸಂಕಲ್ಪ ಈಶ್ವರ ಸಂಕಲ್ಪ. ಎರಡು-ಮಾನವನ ಸತ್ ಸಂಕಲ್ಪ. ಇದು ಪರಿಪೂರ್ಣವಲ್ಲ; ಆಶೆ, ಈಷ್ರ್ಯೆಗಳಿಂದ ವಿಮುಕ್ತವಾದುದಲ್ಲ. ಐಶ್ವರ್ಯ, ಅಧಿಕಾರ, ಅಗ್ಗಳಿಕೆ ಮುಂತಾದ ಐಹಿಕಗಳನ್ನು ಸತ್ ಸಂಕಲ್ಪಕ್ಕೆ ಅಧೀನಗೊಳಿಸಬೇಕು. ಇದನ್ನು ಹೇಗೆ ನಿರ್ವಹಿಸಬಹುದು ಎಂಬುದು ಮಾನವನೀತಿಜೀವನದ ಮುಖ್ಯ ಸಮಸ್ಯೆ. ಪರಿಪೂರ್ಣ ಸಂಕಲ್ಪವಿರುವ ದೇವರಿಗೆ ಯಾವುದನ್ನೂ ದಮನ ಮಾಡುವ ಆವಶ್ಯಕತೆ ಇಲ್ಲ. ಮಾನವನಾದರೋ ಐಹಿಕ ಸುಖವನ್ನು ತಡೆಗಟ್ಟಿ ಸತ್ ಸಂಕಲ್ಪಕ್ಕೆ ಶರಣಾಗಬೇಕು. ಕರ್ತವ್ಯ ನಿಯೋಜ್ಯನಿಯಮ ಪಾಲನೆ. ತನ್ನ ನೀತಿವಿಚಾರಚೇತನ ನಿಯೋಜಿಸಿದ್ದು ಎಂದರೆ ಅಪ್ಪಣೆ ಮಾಡಿದ್ದು ನ್ಯಾಯ. ಅದನ್ನು ಸಾಧಿಸುವುದೇ ಕರ್ತವ್ಯ. ಕರ್ತವ್ಯಭಾವನೆಯಿಂದಲ್ಲದೆ ಉಪಯೋಗದೃಷ್ಟಿಯಿಂದ ಅಥವಾ ಇತರರ ಕಷ್ಟಗಳನ್ನು ನೋಡಿ ಕನಿಕರದಿಂದ ಅಥವಾ ಜೀವನದ ನೆಮ್ಮದಿಯ ದೃಷ್ಟಿಯಿಂದ ಮಾಡಿದ ಕೆಲಸ ಪೂರ್ಣವಾಗಿ ಕರ್ತವ್ಯ ದೃಷ್ಟಿಯಿಂದ ಹುಟ್ಟಿದ್ದಲ್ಲ. ಅನೇಕವೇಳೆ ನಾವು ಮರುಕದಿಂದ ಅಥವಾ ಉಪಯೋಗವಾಗುತ್ತದೆಯೆಂಬ ದೃಷ್ಟಿಯಿಂದ ಅಥವಾ ಸುಖವನ್ನುಂಟು ಮಾಡುತ್ತದೆ ಎಂಬ ಉದ್ದೇಶದಿಂದ ಒಬ್ಬನಿಗೆ ಹಣ ಕೊಡಬಹುದು. ಇದು ಮಾನವ ಸಹಜವಾದ ನೀತಿಯೆಂದು ತೋರಬಹುದು. ಹೀಗೆ ಮಾಡಿದ್ದನ್ನು ಜನರು ಮೆಚ್ಚಬಹುದು. ಆದರೆ ಅದು ಅಪ್ಪಟ ಕರ್ತವ್ಯವಲ್ಲ. ಅದು ಪರಿಪೂರ್ಣಕರ್ತವ್ಯವಲ್ಲ. ಈ ಯಾವ ಉಪಾಧಿಗಳಿಗೂ ಒಳಪಡದೆ ಇದ್ದು ವಿಚಾರಚೈತನ್ಯದಿಂದ ವಿಧಾಯಕವಾದ ನಿಯಮವೆಂದು ತಿಳಿದು ಕೇವಲ ಕರ್ತವ್ಯಭಾರದಿಂದ ಮಾಡಿದ ಕಾರ್ಯವೇ ನಿಜವಾದ ನೀತಿ. ಹೀಗೆ ನಿರುಪಾಧಿಕವಾಗಿ ಮಾಡಿದ ಕರ್ತವ್ಯವೇ ಶ್ರೇಷ್ಠ. ನಿರುಪಾಧಿಕ ಕರ್ತವ್ಯವೇ ನೈತಿಕ ನಿಯಮ. ಇದರಿಂದ ಬೇರೆಯಾದ್ದು ಔಪಾಧಿಕ ಕರ್ತವ್ಯ (ಹೈಪೊತೆಟಿಕಲ್ ಇಂಪರೆಟಿವ್). ಔಪಾಧಿಕ ಕರ್ತವ್ಯ ವಿಚಾರಚೇತನದ ನಿಯೋಗಕ್ಕೆ ಬಾಹಿರವಾದ ಉಪಯೋಗ ಅಥವಾ ಸೌಜ್ಯ ಮುಂತಾದ ಉದ್ದೇಶಗಳ ಉಪಾಧಿಗೆ ಕಟ್ಟುಬಿದ್ದದ್ದು; ನೀತಿಚೇತನದ ನಿಯೋಗವನ್ನು ಗೌರವಿಸಿ ಮಾಡಿದ್ದಲ್ಲ. ನಿರುಪಾಧಿಕ ಕರ್ತವ್ಯದ ಲಕ್ಷಣಗಳು ಮೂರು: ನಿಷ್ಕಾಮ (ಫಲಾಪೇಕ್ಷೆ ಇಲ್ಲದ) ಕರ್ತವ್ಯ. 2 ಈ ನಿಯೋಗ ಕರ್ತವ್ಯವನ್ನು ಫಲಾಪೇಕ್ಷೆ ಇಲ್ಲದೆ ಮಾಡು ಎಂದು ಹೇಳುತ್ತದೆಯಲ್ಲದೆ ಪ್ರತಿಯೊಬ್ಬ ವ್ಯಕ್ತಿಯೂ ಪವಿತ್ರವಾದ ಆತ್ಮವನ್ನು ಪಡೆದಿರುತ್ತಾನೆ, ಆ ಪವಿತ್ರಾತ್ಮಕ್ಕಾಗಿಯೇ ಅವನು ಬಾಳುತ್ತಾನೆಂದು ಭಾವಿಸಿ ಅವನ ವ್ಯಕ್ತಿತ್ವವನ್ನು ಗೌರವಿಸಬೇಕು ಎಂದು ಹೇಳುತ್ತದೆ. ಹೀಗೆ ಹೇಳಿದಾಗ ಕಾಂಟ್ ಸ್ವಾರ್ಥವನ್ನು ಬೋಧಿಸುತ್ತಾನೆಂದು ತಿಳಿಯಕೂಡದು. ತಾರತಮ್ಯವಿಲ್ಲದೆ ಎಲ್ಲರ ವ್ಯಕ್ತಿತ್ವವೂ ಗೌರವಾರ್ಹ ಎಂದು ಅವನ ಭಾವನೆ. ಈ ಭಾವನೆಯಿಂದ ಒಂದು ಸಾರ್ವತ್ರಿಕ ನೀತಿ ನಿಯಮ ಹುಟ್ಟುತ್ತದೆ. ಆ ನಿಯಮದ ಆದೇಶ ಇದು 'ನೀನು ಹೇಗೆ ನಡೆದುಕೊಳ್ಳಬೇಕೆಂದರೆ ನೀನು ಸಂಕಲ್ಪಿಸಿದ ನ್ಯಾಯಸೂತ್ರ ಸಾರ್ವತ್ರಿಕ ನ್ಯಾಯವಾಗಿ ಪರಿಣಮಿಸಬೇಕು'. ತಾರತಮ್ಯವಿಲ್ಲದೆ ಈ ಸೂತ್ರ ಎಲ್ಲರಿಗೂ ಅನ್ವಯವಾಗಬೇಕು. 3 ಹೀಗೆ ಭಾವಿಸಿದಾಗ ವ್ಯಕ್ತಿಗಳು ಸ್ವಾರ್ಥಜೀವಿಗಳಾಗುವುದಿಲ್ಲ. ಧ್ಯೇಯಪ್ರಪಂಚದ ಸಮಾನಸದಸ್ಯರಾಗುತ್ತಾರೆ; ನೀತಿ ನಡೆವಳಿಕೆಗಳಲ್ಲಿ ಸಮಾನ ಭಾಗಿಗಳಾಗುತ್ತಾರೆ; ಅವರದೊಂದು ಒಕ್ಕೂಟವಾಗುತ್ತದೆ. ಸಮಾನಗೌರವ ಭಾವವಿಲ್ಲದ ವ್ಯಕ್ತಿಗಳು ಮಾತ್ರ ಸ್ವತಂತ್ರತಾಗಿರಬಲ್ಲರು. ಆ ಭಾವನೆ ಇಲ್ಲದವರಿಗೆ ನಿಜವಾದ ಸ್ವಾತಂತ್ರ್ಯವಿಲ್ಲ. ಈ ನೀತಿನಿಯಮ ಸ್ವಯಂ ನಿಯೋಜ್ಯ. ಸ್ವಯಂನಿಯೋಜ್ಯ ಕರ್ತವ್ಯವೇ ನಿಜವಾದ ಸ್ವಾತಂತ್ರ್ಯ. ಕ್ರೈಸ್ತತಾತ್ತ್ವಿಕರಂತೆ ಕಾಂಟ್ ನೀತಿನಿಯಮಪಾಲನೆ ಪರಮೇಶ್ವರ ಪ್ರೀತ್ಯರ್ಥವೆಂದು ಹೇಳಲಿಲ್ಲ. ಏಕೆಂದರೆ ಈಶ್ವರ ಭಾವನೆ ಶುದ್ಧವಿಮರ್ಶಚೇತನದಿಂದ ಸ್ಥಾಪಿತವಾದದ್ದಲ್ಲ. ಬದಲು ಈಶ್ವರ ಭಾವನೆಗೆ ಸ್ವಯಂ ನಿಯೋಜಿತವಾದ ನೀತಿತತ್ತ್ವ ಆಧಾರವೆಂದು ಆತ ಹೇಳುತ್ತಾನೆ. ಅಮೃತತ್ವ, ಸ್ವಾತಂತ್ರ್ಯ, ಈಶ್ವರ-ಈ ಮೂರು ಧ್ಯೇಯರೂಪವಾದ ಭಾವನೆಗಳು ನೀತಿ ಜೀವನವನ್ನು ಪರಿಪೂರ್ಣಗೊಳಿಸುವುದಕ್ಕೆ ಅಗತ್ಯವಾದ ಆಧಾರಕಲ್ಪನೆಗಳಾಗಿ ಅವನು ಭಾವಿಸಿದ್ದಾನೆ. ವ್ಯಾವಹಾರಿಕ ಪ್ರಪಂಚದಲ್ಲಿ ನಮ್ಮ ಕರ್ತವ್ಯಭಾವನೆಗೂ ಕರ್ತವ್ಯಕ್ಕೂ ಪ್ರಕೃತಿಯಮಕ್ಕೂ ಸೌಖ್ಯಕ್ಕೂ ವಿರೋಧವಿರುತ್ತದೆ. ಈ ವಿರೋಧವಿಲ್ಲದೆ ಕರ್ತವ್ಯವೂ ಸೌಖ್ಯವೂ ಸಮನ್ವಯಗೊಳ್ಳುವಂತೆ ಒಂದು ಧ್ಯೇಯ ಪರಿಸ್ಥಿತಿಯನ್ನು ನಾವು ಕಲ್ಪಿಸಿಕೊಳ್ಳಬೇಕು. ಸೌಖ್ಯವನ್ನು ನಿರಾಕರಿಸಿದ ಸ್ಟೋಯಿಕ್ ನೀತಿಯಾಗಲಿ ಅಥವಾ ಸುಖವೊಂದನ್ನೇ ಬಯಸಿದ ಎಪಿಕ್ಯೂರಿಯನ್ ನೀತಿಯಾಗಲಿ ನೀತಿಸಂಕಲ್ಪದ ಧ್ಯೇಯವನ್ನು ಸಮಂಜಸವಾಗಿ ನಿರೂಪಿಸಿಲ್ಲ. ಸ್ವತಂತ್ರವಾದ ಮತ್ತು ಅಮೃತವಾದ ಆತ್ಮಕ್ಕೂ ಮತ್ತು ಪ್ರಕೃತಿಗೂ ಸಾಮರಸ್ಯ ಕುದುರಿಸುವ ಈಶ್ವರಭಾವನೆ ನಮಗೆ ವಿಶ್ವದ ವಸ್ತುಗಳಂತೆ ದತ್ತವಾದುದಲ್ಲ. ಅದು ಅಚಲವಾದ ನೈತಿಕಸಂಕಲ್ಪ ಸಾಧನೆಯಿಂದ ಸೃಷ್ಟಿಯಾಗಬೇಕಾದದ್ದು. ಈ ಭಾವನೆಯನ್ನು ಕಾಂಟ್ ವಿಚಾರ ಚೇತನದ ಎಲ್ಲೆಯೊಳಗೆ ಮಾತ್ರ ಸ್ಥಾಪಿಸಬಹುದಾದ ಮತ (ರಿಲಿಜನ್ ವಿದಿನ್ ದಿ ಲಿಮಿಟ್ಸ್ ಆಫ್ ರೀಸನ್ ಅಲೋನ್) ಎಂಬ ತನ್ನ ಗ್ರಂಥದಲ್ಲಿ ವಿಸ್ತರಿಸಿದ್ದಾನೆ. 3 ಕ್ರಿಟೀಕುಗಳಲ್ಲಿ ಉಳಿದಿರುವುದು ಕ್ರಟೀಕ್ ಆಫ್ ಜಜ್‍ಮೆಂಟ್ ಎಂಬ ಅವನ ಮೂರನೆಯ ಮೇರುಕೃತಿ. ಈ ಗ್ರಂಥದಲ್ಲಿ ಅವನು ಮುಖ್ಯವಾಗಿ ವಿಚಾರಮಾಡುವ ವಿಷಯಗಳು ಎರಡು: ಕಲೆಯ ಕೃತಿಯಲ್ಲಿರುವಂತೆ ಪ್ರಕೃತಿಯಲ್ಲಿ ನಾವು ಕಾಣಬಹುದುದಾದ ಸೌಂದರ್ಯ ಮತ್ತು ಹೊಂದಿಕೆ. ಇದು ಸುಂದರವಾದದ್ದು ಎಂದು ನಾವು ಭಾವಿಸಿದಾಗ ಅದರಲ್ಲಿ ನಾವು ಕಾಣುವ ಹೊಂದಿಕೆಯಿಂದ ನಮಗೆ ಆಹ್ಲಾದವುಂಟಾಗುತ್ತದೆ. ಇದು ವೈಯಕ್ತಿಕವಾಗಿ ಒಬ್ಬರಿಗೆ ಮಾತ್ರ ಉಂಟಾಗುವ ಆಹ್ಲಾದವಲ್ಲ. ಸೂರ್ಯ ಮುಳುಗಿದಾಗ ಅಥವಾ ಕಾಮನಬಿಲ್ಲನ್ನು ನೋಡಿದಾಗ ನಮಗೆ ಕಾಣುವ ಬಣ್ಣಗಳ ಹೊಂದಿಕೆ ಅನೇಕರನ್ನು ಸಂತೋಷದಲ್ಲಿ ಮುಳುಗಿಸುತ್ತದೆ. ಹಾಗೆಯೇ ಒಂದು ಪ್ರಾಣಿಯನ್ನು ನೋಡಿದಾಗ ಅದರ ಅಂಗರಚನೆಯಲ್ಲಿ ಕಾಣುವ ಹೊಂದಿಕೆ ನಮ್ಮನ್ನು ವಿಸ್ಮಯ ಗೊಳಿಸುತ್ತದೆ. ಈ ಸೌಂದರ್ಯದ ಅರಿವು ಭಾವ (ಫೀಲಿಂಗ್) ರೂಪವಾದದ್ದು; ವೈಜ್ಞಾನಿಕ ತಿಳಿವಿನಂತೆ ವಿಕಲ್ಪರೂಪವಾದ್ದಲ್ಲ. ಆದರೂ ಈ ಅರಿವು ಸಾರ್ವತ್ರಿಕ. ಇದು ಸುಂದರವಾದದ್ದು ಎಂಬುದು ಸಾರ್ವತ್ರಿಕವಾದ್ದರಿಂದ ಇದು ವಿಜ್ಞಾನದ ಸಾಮಾನ್ಯ ಪ್ರತಿಜ್ಞೆಯನ್ನು ಹೋಲುತ್ತದೆ. ನಾವು ಪ್ರಕೃತಿಯ ಭಾಗಗಳಲ್ಲಿ ಕಾಣುವ ಹೊಂದಿಕೆ ಉದ್ದೇಶ ಪೂರ್ವಕವಾಗಿ ಯಾವುದೋ ಒಂದು ಅತೀತಚೇತನದಿಂದ ಹುಟ್ಟಿದ್ದು ಎಂದು ಹೇಳಲಾಗದಿದದ್ದರೂ ಆ ಹೊಂದಿಕೆ ಕೇವಲ ಆಕಸ್ಮಿಕವೆಂದು ಹೇಳಲಾಗದು. ಅದು ಕೇವಲ ಆಕಸ್ಮಿಕವೆಂದು ನಂಬುವುದಾದರೆ ನಮಗೆ ವೈಜ್ಞಾನಿಕ ಸಂಶೋಧನೆಯಲ್ಲಿ ಇರುವ ಸಹಜವಾದ ಆಸಕ್ತಿ ಬತ್ತಿಹೋಗುತ್ತದೆ. ವಿಜ್ಞಾನಿಗಳಾದ ನಾವು ಸೂರ್ಯಚಂದ್ರಾದಿಗಳು ಯಾವುದೋ ಒಂದು ಚೇತನ ಸಂಕಲ್ಪಕ್ಕೆ ಅನುಸಾರವಾಗಿ ನಡೆಯುತ್ತಿವೆ ಎಂದು ನಂಬಿ, ಉದ್ದೇಶವನ್ನು ಪ್ರಕೃತಿಯ ನಡೆವಳಿಕೆಗೆ ಆರೋಪಿಸುವುದು ದೂಷ್ಯವಾದರೂ ಪ್ರಕೃತಿ ಹಾಗಿರುವುದೋ ಎಂಬಂತೆ ಭಾವಿಸುವುದು ಅನಿವಾರ್ಯವಾಗುತ್ತದೆ. ವಿಜ್ಞಾನಿಗಳಾದ ನಮಗೆ ಸಾಮರಸ್ಯದಲ್ಲಿ ನಂಬಿಕೆ ತಪ್ಪಿದಲ್ಲಿ ನಮ್ಮ ವೈಜ್ಞಾನಿಕ ಸಂಸೋಧನೆಯ ಉತ್ಸಾಹ ಕುಸಿದು ಬೀಳುತ್ತದೆ. ಇಂಥ ನಂಬಿಕೆಯ ನಿಯಂತ್ರಣದಿಂದಲ್ಲವೆ ನ್ಯೂಟನ್ ಭೌತ ವಿಜ್ಞಾನ ಸಂಶೋಧನೆಯ ಸಾಹಸದಲ್ಲಿ ತೊಡಗಿದ್ದು. ಈ ಉದ್ದೇಶ ಸಕಲ ವೈಜ್ಞಾನಿಕ ಸಾಹಸಕ್ಕೆ ಆಧಾರವಾದ ಕಲ್ಪನೆ. ಇದು ಕೇವಲ ವೈಜ್ಞಾನಿಕ ಕಾರ್ಯವಿಧಾನಕ್ಕೆ ನಿಯತವಾದ ಕಲ್ಪನೆಯಾಗಿ ಭಾವಿಸಬೇಕೇ ಹೊರತು ವಿಜ್ಞಾನ ವಿಚಾರ ಮಾಡುವ ವಸ್ತುಗಳು ಉದ್ದೇಶಪೂರ್ವಕವಾಗಿ ನಡೆಯುತ್ತವೆ ಎಂಬ ಪರಮ ಸಿದ್ಧಾಂತವಾಗಿ ಭಾವಿಸಕೂಡದು. ವಿಚಾರ ಅವಧಿಯ ಅನಂತರ ಬರೆವಣಿಗಳು[ಬದಲಾಯಿಸಿ] 1781ರಿಂದ 1791ರ ವರೆಗೆ ಕಾಂಟ್ ರಚಿಸಿದ ಮೂರು ಕೃತಿಗಳು ವಿಚಾರ ಅವಧಿಗೆ ಸೇರಿದವು. ಅದರ ಅನಂತರದ ಬರೆವಣಿಗೆಗಳು ಸಂಕೀರ್ಣ ಸಂಪುಟಗಳು. ರಿಲಿಜನ್ ವಿದಿನ್ ದಿ ಬೌಂಡ್ಸ್ ಆಫ್ ಮಿಯರ್ ರೀಸನ್ (1793) ಮತ ಮೀಮಾಂಸೆಗೆ ಸಂಬಂಧಪಟ್ಟದ್ದು. ಪರ್ಪೆಚ್ಯುಆಲ್ ಪೀಸ್ ಎಂಬ ಗ್ರಂಥ ರಾಜ್ಯಶಾಸ್ತ್ರಕ್ಕೆ ಸಂಬಂಧಪಟ್ಟದ್ದು. ಮೆಟಫಿಸಿಕ್ಸ್ ಆಫ್ ಮಾರಲ್ಸ್ ನೀತಿಶಾಸ್ತ್ರಬೋಧಕರ ಉಪಯೋಗಕ್ಕಾಗಿ ಬರೆದ ಸಣ್ಣ ಗ್ರಂಥ. ಕಾಂಟ್ ತನ್ನ ಜೀವನದ ಅಂತ್ಯಕಾಲದಲ್ಲಿ ಟಿಪ್ಪಣಿಗಳ ರೂಪದಲ್ಲಿ ಕೆಲವು ಲೇಖನಗಳನ್ನು ಬರೆದಿದ್ದ. ಅವುಗಳನ್ನೆಲ್ಲ ಸೇರಿಸಿ ಅವನ ಅನುಯಾಯಿಗಳು ಅದಕ್ಕೆ ಓಪಸ್ ಕಾಸ್ಟೂಮಮ್ ಎಂಬ ಶೀರ್ಷಿಕೆಯನ್ನು ಕೊಟ್ಟು ಅವನ ಮರಣಾನಂತರ ಬರ್ಲಿನ್ ನಲ್ಲಿ ಎರಡು ಸಂಪುಟಗಳಲ್ಲಿ ಪ್ರಕಟಿಸಿದರು. ಈ ಟಿಪ್ಪಣಿಗಳಲ್ಲಿ ಅವನ ಅನಂತರ ಬಂದ ಷೆಲ್ಲಿಂಗ್ ಮುಂತಾದವರ ತತ್ತ್ವಕ್ಕೆ ಪ್ರಚೋದಕಗಳಾದ ಅಂಶಗಳು ಕಂಡು ಬರುತ್ತವೆ. ಆಧುನಿಕ ಪಾಶ್ಚಾತ್ಯ ತತ್ತ್ವಶಾಸ್ತ್ರದ ದಾರಿಯಲ್ಲಿ ಕಾಂಟನ ಸ್ಥಾನವೇನು, ಅವನ ತತ್ತ್ವ ಮುಂದೆ ಯಾರ ಮೇಲೆ ಎಷ್ಟು ಪ್ರಭಾವ ಬೀರಿತು ಎಂಬುದನ್ನು ತಿಳಿಯಲು ಕಾಂಟನ ಸೌಂದರ್ಯ ಮೀಮಾಂಸೆ : ಕ್ರಿಟೀಕ್ ಆಫ್ ಜಜ್‍ಮೆಂಟ್ ಎನ್ನುವ ಗ್ರಂಥದಲ್ಲಿ ಕಾಂಟನ ಸೌಂದರ್ಯ ಮೀಮಾಂಸೆ ಅಡಕವಾಗಿದೆ. ಸೌಂದರ್ಯಾನುಭವವನ್ನು ಒಂದು ವಿಶಿಷ್ಟ ರೀತಿಯ ಜ್ಞಾನವೆಂದೇ ಈತ ಪರಿಗಣಿಸುತ್ತಾನೆ. ಇದೊಂದು ಪರಿಪೂರ್ಣ ಜ್ಞಾನ. ಆದರೆ ಇದನ್ನು ಸಾಧಿಸುವುದು ಕೇವಲ ಬುದ್ಧಿಯಿಂದ ಆಗದ ಮಾತು. ಬುದ್ಧಿಗೆ ನಿಲುಕುವ ಜ್ಞಾನ ಅನುಭವಸಿದ್ಧವಾಗಿರುತ್ತದೆ. ಅನುಭವದ ಆಧಾರವೂ ಇಲ್ಲದೆ ಅನುಮಾನವೂ ಕಷ್ಟವಾಗುತ್ತದೆ. ಎಂದರೆ ಇದು ಬುದ್ಧಿ ಅಥವಾ ತರ್ಕಜನ್ಯ ಜ್ಞಾನದ ಮಿತಿ. ಈ ಮಿತಿ ನೀತಿಜ್ಞಾನದಲ್ಲಿ ಸ್ವಲ್ಪ ಸುಧಾರಿಸಿರುತ್ತದೆ. ಏಕೆಂದರೆ ನೀತಿಜ್ಞಾನ ಬುದ್ಧ್ಯಾರೂಢ. ಇಂಥ ಸಂದರ್ಭಗಳಲ್ಲಿ ಅನುಭವದ ಆಧಾರವಿಲ್ಲದೆಯೇ ಪ್ರತ್ಯಕ್ಷ ಜ್ಞಾನ ನಮ್ಮನ್ನು ನಡೆಸಿರುತ್ತದೆ. ಇಂಥ ಪ್ರತ್ಯಕ್ಷ ಜ್ಞಾನದ ಮೂಲವೇ ಆತ್ಮಜ್ಞಾನ ಲಭಿಸಬೇಕಾದರೆ ಅನುಭವಲೋಕದ ಒಂದು ಇರುವಿಕೆ, ನೀತಿಲೋಕದ ಒಂದು ಆದರ್ಶ ಸ್ಥಿತಿ-ಇವೆರಡೂ ಒಂದೇ ಸಂದರ್ಭದಲ್ಲಿ ಸಿದ್ಧಿಸುವುದು ದುರ್ಲಭ. ಎಂದರೆ ಹೇಗೆ ಇರಬೇಕೋ ಹಾಗೆಯೇ ಇರುವುದು ಬಹಳ ಅಪರೂಪ. ಅಂಥ ಸ್ಥಿತಿ ಒದಗಿದರೆ ಅದು ನಮ್ಮ ಪುಣ್ಯ. ಇಂಥ ಒಂದು ಭಾಗ್ಯ ಅಥವಾ ಸುಸಂದರ್ಭ ಸೌಂದರ್ಯ ಕ್ಷೇತ್ರದಲ್ಲಿ ಲಭಿಸುತ್ತದೆಂದು ಕಾಂಟನ ಮತ. ಎಂದರೆ ಸೌಂದರ್ಯಾನುಭವದಲ್ಲಿ ತರ್ಕ ಮತ್ತು ನೀತಿಗಳು ಒಂದಾಗುತ್ತವೆ. ಆದ್ದರಿಂದ ಸೌಂದರ್ಯಾನುಭವ ಇವೆರಡಕ್ಕಿಂತಲೂ ಹೆಚ್ಚು ಉದಾತ್ತ ಮಟ್ಟದಲ್ಲಿದ್ದು ಆತ್ಮದರ್ಶನದ ಸಾಧನವಾಗುತ್ತದೆ. ಆ ಕ್ಷೇತ್ರದಲ್ಲಿ ಆತ್ಮದ ಪ್ರಕಾಶನಕ್ಕೆ ಅವಕಾಶವಿದ್ದು ಆತ್ಮ ತಾನೇ ತಾನಾಗಿ ಮೆರೆಯುತ್ತದೆ. ಸೌಂದರ್ಯಾನುಭವದ ಲಕ್ಷಣವೆಂದರೆ-ಅದು ವೈಯಕ್ತಿಕವಲ್ಲ, ಸಾರ್ವತ್ರಿಕ, ಸೌಂದರ್ಯದ ವಸ್ತು ದೇಶಕಾಲಗಳಲ್ಲಿರಬಹುದಾದ ವಸ್ತುವಲ್ಲ. ತರ್ಕಜ್ಞಾನ ಒಂದು ಸಿದ್ಧಾಂತವನ್ನು ಸೃಷ್ಟಿಮಾಡುವಂತೆ ಸೌಂದರ್ಯಾನುಭವ ಒಂದು ಸುಂದರ ವಸ್ತುವನ್ನು ನಿರ್ಮಾಣಮಾಡುತ್ತದೆ. ಈ ವಸ್ತು ಇಂದ್ರಿಯಾತೀತ ಮತ್ತು ಬುದ್ಧಿಗೆ ಅಪ್ರಾಪ್ಯ. ಎಂದರೆ ಸೌಂದರ್ಯಾನುಭವದ ವಸ್ತು ವ್ಯವಹಾರಿಕ ಅಥವಾ ಪ್ರಾಪಂಚಿಕ ನಿಯಮಗಳಿಗೆ ಅತೀತವಾಗಿದ್ದು, ಅವುಗಳ ಮಾನದಂಡಗಳಿಗೆ ತಲೆಬಾಗುವುದಿಲ್ಲ. ಕಾಂಟನ ಈ ವಿಚಾರದ ಮೇರೆಗೆ, ಸೌಂದರ್ಯ ಜ್ಞಾನ ತರ್ಕ ಮತ್ತು ನೀತಿಜ್ಞಾನಗಳಿಂದ ಪ್ರತ್ಯೇಕವೆಂದು ತಿಳಿಯುತ್ತದೆ. ಸೌಂದರ್ಯಾನುಭವ ಇಂದ್ರಿಯಜನ್ಯವಲ್ಲ, ಬೋಧಕವಲ್ಲ. ಅದೊಂದು ನಿಸ್ವಾರ್ಥ, ನಿರ್ಲಿಪ್ತ, ಅನಾಸಕ್ತ ಅನುಭವ. ಆದ್ದರಿಂದ ಒಂದು ಕಲಾಕೃತಿಯ ನಿರ್ಮಾಣದಲ್ಲಿ ಕಲಾವಿದನಾದ ಮಾನವ ಕೇವಲ ಕುಂಚ. ಕಲಾಕೃತಿ ಸ್ವಯಂಶಾಸನಾಧಿಕಾರಿಯಾಗಿದ್ದು ತನ್ನನ್ನು ತಾನೇ ಚಿತ್ರಿಸಿಕೊಳ್ಳುವ ಒಂದು ಮಹಾ ಚೈತನ್ಯವಾಗಿದೆ. ಒಂದು ಕೃತಿಯ ಆದರ್ಶ ಆ ಕೃತಿಗೇ ಸೇರಿದ್ದು. ಅದಕ್ಕೆ ಅನ್ಯವಾದ ಆದರ್ಶ ಬೇರೊಂದಿಲ್ಲ. ಕಲಾವಿದನಾಗಲೀ ವಿಮರ್ಶಕನಾಗಲೀ ಅದನ್ನು ನಿರ್ದೇಶಿಸುವ ಹಾಗೆಯೂ ಇರುವುದಿಲ್ಲ. ಕಲಾಕೃತಿಯೆಂದರೆ ಸ್ವಯಂ ಪರಿವರ್ತನಾಶಕ್ತಿಯನ್ನೂ ನಿರ್ದೇಶನಶಕ್ತಿಯನ್ನೂ ಹೊಂದಿರುವ ಬ್ರಹ್ಮಚೈತನ್ಯ. ಈ ಕಾರಣದಿಂದ ಬಹು ಶ್ರೇಷ್ಠ ಕಲಾಕೃತಿ ಅಮರ ಮತ್ತು ಸರ್ವ ಸಮರ್ಪಕ. [೧] ಬಾಹ್ಯ ಸಂಪರ್ಕಗಳು[ಬದಲಾಯಿಸಿ] Library resources about ಇಮ್ಯಾನ್ಯುಅಲ್ ಕಾಂಟ್ ಟೆಂಪ್ಲೇಟು:Library link about ಟೆಂಪ್ಲೇಟು:Library link about By ಇಮ್ಯಾನ್ಯುಅಲ್ ಕಾಂಟ್ ಟೆಂಪ್ಲೇಟು:Library link by ಟೆಂಪ್ಲೇಟು:Library link by ವಿಕಿಕೋಟ್ ತಾಣದಲ್ಲಿ ಈ ವಿಷಯಕ್ಕೆ ಸಂಭಂಧಪಟ್ಟ ನುಡಿಗಳು ಇವೆ: [[wikiquote:kn:{{{1}}}|ಇಮ್ಯಾನ್ಯುಅಲ್ ಕಾಂಟ್]] ವಿಕಿಮೀಡಿಯ ಕಣಜದಲ್ಲಿ ಇಮ್ಯಾನ್ಯುಅಲ್ ಕಾಂಟ್ ವಿಷಯಕ್ಕೆ ಸಂಬಂಧಿಸಿದ ಮಾಧ್ಯಮಗಳಿವೆ . Wikisource has original works written by or about: ಇಮ್ಯಾನ್ಯುಅಲ್ ಕಾಂಟ್ Works by Immanuel Kant at Project Gutenberg Works by or about ಇಮ್ಯಾನ್ಯುಅಲ್ ಕಾಂಟ್ at Internet Archive ಟೆಂಪ್ಲೇಟು:Librivox author KantPapers, authors and papers database powered by PhilPapers, focused on Kant, and located at Cornell University Immanuel Kant at the Encyclopædia Britannica Immanuel Kant in the Christian Cyclopedia Works by Immanuel Kant at Duisburg-Essen University Stephen Palmquist's Glossary of Kantian Terminology Kant's Ethical Theory – Kantian ethics explained, applied and evaluated Kant & Ethics – Extensive links and discussions from Lawrence Hinman at University of San Diego Notes on Utilitarianism – A conveniently brief survey of Kant's Utilitarianism Kant Studies Online Routledge Encyclopedia of Philosophy (14 sections on Kant) Readable versions of Prolegomena, Groundwork for the Metaphysic of Morals, Critique of Pure Reason, Metaphysical Foundations of Natural Science, The Form and Principles of the Sensible and Intelligible World, Perpetual Peace, and Religion within the Bounds of Bare Reason. (J. Bennett translations) Kant's Death Mask Kant in the Classroom – Background information for Kant's lectures The Internet Encyclopedia of Philosophy has multiple entries on Kant: Immanuel Kant: An Overview Immanuel Kant: Aesthetics Immanuel Kant: Metaphysics Immanuel Kant: Radical Evil Immanuel Kant: Religion The Stanford Encyclopedia of Philosophy has several entries on Kant: Immanuel Kant Kant's Philosophical Development Kant's Account of Reason Kant's Critique of Metaphysics Kant's Theory of Judgment Kant's Transcendental Arguments Kant's View of the Mind and Consciousness of Self Kant's Views on Space and Time Kant's Aesthetics and Teleology Kant's Philosophy of Mathematics Kant's Philosophy of Science Kant's Philosophy of Religion Kant's Moral Philosophy Kant's Social and Political Philosophy Leibniz's Influence on Kant Kant and Hume on Causality Kant and Hume on Morality ಉಲ್ಲೇಖ[ಬದಲಾಯಿಸಿ] ↑ ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಕಾಂಟ್, ಇಮ್ಯಾನ್ಯುಅಲ್ "https://kn.wikipedia.org/w/index.php?title=ಇಮ್ಯಾನ್ಯುಅಲ್_ಕಾಂಟ್&oldid=1016820" ಇಂದ ಪಡೆಯಲ್ಪಟ್ಟಿದೆ ವರ್ಗಗಳು: Use dmy dates from January 2013 Articles with invalid date parameter in template Infobox philosopher maintenance Articles with Internet Archive links ತತ್ವಶಾಸ್ತ್ರಜ್ಞರು ಸಂಚರಣೆ ಪಟ್ಟಿ ವೈಯಕ್ತಿಕ ಉಪಕರಣಗಳು ಲಾಗಿನ್ ಆಗಿಲ್ಲ ಈ ಐ.ಪಿ ಗೆ ಮಾತನಾಡಿ ಕಾಣಿಕೆಗಳು ಹೊಸ ಖಾತೆ ತೆರೆಯಿರಿ ಲಾಗ್ ಇನ್ ನಾಮವರ್ಗಗಳು ಲೇಖನ ಚರ್ಚೆ ರೂಪಾಂತರಗಳು ನೋಟಗಳು ಓದು ಸಂಪಾದಿಸಿ ಇತಿಹಾಸವನ್ನು ನೋಡಿ More ಹುಡುಕು ಸಂಚರಣೆ ಮುಖ್ಯ ಪುಟ ಸಮುದಾಯ ಪುಟ ಪ್ರಚಲಿತ ಇತ್ತೀಚೆಗಿನ ಬದಲಾವಣೆಗಳು ಯಾವುದೋ ಒಂದು ಪುಟ ಸಹಾಯ ಅರಳಿ ಕಟ್ಟೆ ವಿಕಿಮೀಡಿಯಾಕ್ಕೆ ದಾನ ಮಾಡಿ ಉಪಕರಣ ಇಲ್ಲಿಗೆ ಯಾವ ಸಂಪರ್ಕ ಕೂಡುತ್ತದೆ ಸಂಬಂಧಪಟ್ಟ ಬದಲಾವಣೆಗಳು ವಿಶೇಷ ಪುಟಗಳು ಸ್ಥಿರ ಕೊಂಡಿ ಪುಟದ ಮಾಹಿತಿ ಈ ಪುಟವನ್ನು ಉಲ್ಲೇಖಿಸಿ Short URL ವಿಕಿಡಾಟಾ ವಸ್ತು ಮುದ್ರಿಸು/ರಫ್ತು ಮಾಡು ಪುಸ್ತಕವನ್ನು ಸೃಷ್ಟಿಸಿ PDF ಎಂದು ನಕಲಿಳಿಸಿ ಮುದ್ರಣ ಆವೃತ್ತಿ ಇತರೆ ಯೋಜನೆಗಳಲ್ಲಿ Wikimedia Commons ಇತರ ಭಾಷೆಗಳು Afrikaans Alemannisch አማርኛ Aragonés العربية الدارجة مصرى Asturianu Aymar aru Azərbaycanca تۆرکجه Башҡортса Žemaitėška Bikol Central Беларуская Беларуская (тарашкевіца)‎ Български भोजपुरी বাংলা Brezhoneg Bosanski Буряад Català Chavacano de Zamboanga Нохчийн Cebuano کوردی Čeština Чӑвашла Cymraeg Dansk Deutsch Zazaki Ελληνικά Emiliàn e rumagnòl English Esperanto Español Eesti Euskara Estremeñu فارسی Suomi Võro Føroyskt Français Arpetan Nordfriisk Frysk Gaeilge 贛語 Kriyòl gwiyannen Gàidhlig Galego ગુજરાતી עברית हिन्दी Fiji Hindi Hrvatski Magyar Հայերեն Interlingua Bahasa Indonesia Interlingue Ilokano Ido Íslenska Italiano 日本語 Patois Jawa ქართული Qaraqalpaqsha Taqbaylit Kabɩyɛ Қазақша 한국어 Kurdî Кыргызча Latina Lëtzebuergesch Лезги Lingua Franca Nova Limburgs Ligure Ladin Lumbaart لۊری شومالی Lietuvių Latviešu मैथिली Malagasy Македонски മലയാളം Монгол मराठी Кырык мары Bahasa Melayu Malti Mirandés မြန်မာဘာသာ Эрзянь Nāhuatl Plattdüütsch नेपाली नेपाल भाषा Nederlands Norsk nynorsk Norsk bokmål Occitan Livvinkarjala ਪੰਜਾਬੀ Polski Piemontèis پنجابی پښتو Português Runa Simi Rumantsch Română Русский Русиньскый Kinyarwanda संस्कृतम् Саха тыла Sardu Sicilianu Scots Srpskohrvatski / српскохрватски Simple English Slovenčina Slovenščina Shqip Српски / srpski Sunda Svenska Kiswahili தமிழ் తెలుగు Тоҷикӣ ไทย Tagalog Tok Pisin Türkçe Татарча/tatarça Українська اردو Oʻzbekcha/ўзбекча Vepsän kel’ Tiếng Việt West-Vlams Volapük Winaray 吴语 მარგალური ייִדיש Yorùbá Zeêuws 中文 文言 Bân-lâm-gú 粵語 ಕೊಂಡಿಗಳನ್ನು ಸಂಪಾದಿಸಿ ಈ ಪುಟವನ್ನು ೨೨ ನವೆಂಬರ್ ೨೦೨೦, ೦೭:೧೫ ರಂದು ಕೊನೆಯಾಗಿ ಸಂಪಾದಿಸಲಾಯಿತು. ಪಠ್ಯವು Creative Commons Attribution-ShareAlike License ನಡಿ ಲಭ್ಯವಿದೆ; ಮತ್ತಷ್ಟು ಷರತ್ತುಗಳು ಅನ್ವಯಿಸಬಹುದು. ಹೆಚ್ಚಿನ ವಿವರಗಳಿಗೆ ಬಳಕೆಯ ಷರತ್ತುಗಳು ನೋಡಿ. ಖಾಸಗಿ ಮಾಹಿತಿಯ ಬಗ್ಗೆ ನಿಲುವು ಕನ್ನಡ ವಿಕಿಪೀಡಿಯ ಬಗ್ಗೆ ಹಕ್ಕು ನಿರಾಕರಣೆಗಳು ಮೊಬೈಲ್ ವೀಕ್ಷಣೆ ಡೆವೆಲಪರ್‌ಗಳು Statistics Cookie statement